ತಾಂತ್ರಿಕ ಆವಿಷ್ಕಾರಗಳು ನಮ್ಮ ದಿನನಿತ್ಯದ ಬದುಕುಗಳನ್ನು ಸರಳ ಹಾಗು ಸುಲಭವಾಗಿಸಿದಂತೆಯೇ ಕೆಲವೊಮ್ಮೆ ಫಜೀತಿಗಳನ್ನೂ ಸಹ ತಂದು ಇಡುತ್ತಿವೆ. ಟೈಪಿಂಗ್ ಮಾಡುವಾಗ ಸಹಾಯಕ್ಕೆ ಬರುವ ಆಟೋ-ಕರೆಕ್ಟ್ ಫೀಚರ್‌ನಿಂದ ನಿಮಗೆ ಅನುಕೂಲವಾಗುವುದಕ್ಕಿಂತ ಅನಾನುಕೂಲವಾಗುವ ಸಾಧ್ಯತೆಗಳು ಹೆಚ್ಚಿವೆ.
ಅಮೆರಿಕದ ಯುವತಿಯೊಬ್ಬಳು ತನ್ನ ತಂದೆಗೆ ಕಳುಹಿಸಿದ ಸಂದೇಶವೊಂದರಲ್ಲಿ ಆಟೋ-ಕರೆಕ್ಟ್ ಮಾಡಿದ ಎಡವಟ್ಟಿನಿಂದಾಗಿ ’swabbed’ ಎಂದು ಟೈಪ್ ಮಾಡಬೇಕಾದ ಜಾಗದಲ್ಲಿ ’stabbed (ಚೂರಿಯಲ್ಲಿ ಇರಿಯುವುದು) ಎಂದು ಟೈಪ್ ಮಾಡಿದ ಕಾರಣ ಸಾಕಷ್ಟು ಅವಾಂತರವಾಗಿದೆ.
ವಿಸ್ಕಾನ್ಸಿನ್‌ನ ಮೆನಾಶಾ ನಗರದಲ್ಲಿ ಈ ಘಟನೆ ಜರುಗಿದೆ. ತನ್ನ ಅಪ್ಪನಿಗೆ ಸಂದೇಶ ಕಳುಹಿಸುತ್ತಿದ್ದ ಪುತ್ರಿ, ತಾನು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ಹೇಳಲು ’swabbing’ ಎಂದು ಟೈಪ್ ಮಾಡಿದರೆ ಆಟೋ-ಕರೆಕ್ಟ್ ಅದನ್ನು ’stabbing’ ಎಂದು ಮಾಡಿಬಿಟ್ಟಿದೆ. ಸಂದೇಶ ಸ್ವೀಕರಿಸಿದ ಆಕೆಯ ತಂದೆ ಅದನ್ನು ಓದಿ ಬೆಚ್ಚಿ ಬಿದ್ದಿದ್ದಾರೆ.
ತನ್ನ ಮಗಳನ್ನು ಆಕೆಯ ಬಾಯ್‌ಫ್ರೆಂಡ್ ಚೂರಿ ಇರಿದು ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ಅಪ್ಪ ಪೊಲೀಸರಿಗೆ ತಕ್ಷಣ ದೂರು ಕೊಟ್ಟುಬಿಟ್ಟಿದ್ದಾರೆ. ಪೊಲೀಸ್ ಅಧಿಕಾರಿ ನಿಕ್ ಒಲೆಜಾಕ್ ನೇತೃತ್ವದಲ್ಲಿ ಚುರುಕಿನ ಕಾರ್ಯಾಚರಣೆಗೆ ಮುಂದಾದ ತಂಡ ಯುವತಿಯ ಅಪಾರ್ಟ್‌ಮೆಂಟ್ ಬಳಿ ಹೋದಾಗ ಅಂಥದ್ದೇನೂ ಆಗಿಲ್ಲವೆಂದು ಖಚಿತಪಡಿಸಿಕೊಂಡಿದೆ.
ಆಟೋ ಕರೆಕ್ಟ್ ಮಾಡಿದ ಪ್ರಮಾದದಿಂದ ಹೀಗೆ ಆಗಿದೆ ಎಂದು ತಿಳಿದ ಪೊಲೀಸರು, ಇನ್ನೊಮ್ಮೆ ಸಂದೇಶ ಕಳುಹಿಸುವ ಸಂದರ್ಭದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.