ಅಮೆರಿಕದ ಅಲಬಾಮಾದ ಪಟ್ಟಣವೊಂದರಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದ್ಯ ಉತ್ಪಾದನಾ ಘಟಕವೊಂದನ್ನು ಪೊಲೀಸರು ರೇಡ್ ಮಾಡಿದ್ದಾರೆ.
ಇಲ್ಲಿನ ರೇನ್ಸ್‌ವಿಲ್ಲೆ ನಗರದಲ್ಲಿ ಇರುವ ಪುರಸಭೆಯ ತ್ಯಾಜ್ಯ ನೀರು ನಿರ್ವಹಣಾ ಘಟಕವೊಂದರ ಬಳಿ ಈ ಮದ್ಯ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಈ ಘಟಕದ ಬಗ್ಗೆ ಸಿಕ್ಕ ಪಕ್ಕಾ ಮಾಹಿತಿಯನ್ನು ಆಧರಿಸಿ ಈ ರೇಡ್ ಮಾಡಲಾಗಿದ್ದು, ಭಾರೀ ಕಾಂಡವನ್ನೇ ಬಯಲಿಗೆ ಎಳೆಯಲಾಗಿದೆ.
ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿರುವ ಪೊಲೀಸರು ಜೊತೆಯಲ್ಲಿ ಆಪಾದಿತ ಅಲೆನ್ ಮಾರೀಸ್ ಸ್ಟೀಲ್ ಎಂಬಾತನನ್ನು ಬಂಧಿಸಿದ್ದಾರೆ. ತನ್ನ ಅಧಿಕೃತ ಸ್ಥಾನಮಾನವನ್ನು ದುರುಪಯೋಗ ಮಾಡಿಕೊಂಡು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ಆಪಾದನೆಯ ಆರೋಪಪಟ್ಟಿಯನ್ನು ಈತನ ಮೇಲೆ ಜಡಿಯಲಾಗಿದೆ.
ಅಲಬಾಮಾ ರಾಜ್ಯದ ಮನೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ವೈನ್ ತಯಾರಿಸಲು ಅನುಮತಿ ಇದೆ. ಆದರೆ 15 ಗ್ಯಾಲನ್‌ಗಿಂತ ಹೆಚ್ಚು ಪ್ರಮಾಣದಲ್ಲಿ, ಒಮ್ಮೆಲೆ ವೈನ್ ಅಥವಾ ಬಿಯರ್ ಉತ್ಪಾದನೆ ಮಾಡುವುದು ಅಕ್ರಮವಾಗಿದೆ. ಬಿಳಿ ಹಾಗೂ ಕೆಂಪು ಮದ್ಯವನ್ನು 100 ಗ್ಯಾಲನ್‌ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಚಿತ್ರಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.