ಕಂಪ್ಯೂಟರ್ ಅಂಗಡಿಯ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ ವಿರುದ್ಧ $500 ದಶಲಕ್ಷ ಪರಿಹಾರ ಕೋರಿ ಮಾನಹಾನಿ ಪ್ರಕರಣ ದಾಖಲಿಸಿರುವ ಘಟನೆ ಅಮೆರಿಕದಲ್ಲಿ ಜರುಗಿದೆ.
ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಪುತ್ರ ಹಂಟರ್ ಬೈಡೆನ್‌ರ ಲ್ಯಾಪ್ಟಾಪ್‌ನಲ್ಲಿರುವ ಮಾಹಿತಿಯನ್ನು ರಿಕವರ್ ಮಾಡಿಕೊಳ್ಳಲು ಡೆಲಾವರ್ ಮೂಲದ ದಿ ಮ್ಯಾಕ್ ಶಾಪ್ ಮಾಲೀಕರಿಗೆ ದುಡ್ಡು ಕೊಡಲಾಗಿದೆ ಎಂದು ವಿವಾದಿತ ಸುದ್ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದಿಯಾಗಿತ್ತು.
ಈ ಹಾರ್ಡ್‌ವೇರ್‌ನ ಕಾಪಿಯೊಂದರಿಂದ ತೆಗೆದುಕೊಂಡಿದ್ದು ಎನ್ನಲಾದ ಕೆಲವೊಂದು ಇ-ಮೇಲ್‌ಗಳು ಹಾಗೂ ಚಿತ್ರಗಳನ್ನು ಸಹ ನ್ಯೂಯಾರ್ಕ್ ಪೋಸ್ಟ್ ಪ್ರಕಟಿಸಿತ್ತು. ಈ ಸುದ್ದಿ ವೈರಲ್ ಆಗುತ್ತಲೇ, ಮೇಲ್ಕಂಡ ಲೇಖನವನ್ನು ತಮ್ಮ ಪ್ಲಾಟ್‌ಫಾರಂಗಳಲ್ಲಿ ಬಿತ್ತರವಾಗದಂತೆ ಫೇಸ್ಬುಕ್ ಹಾಗೂ ಟ್ವಿಟರ್ ಬ್ಲಾಕ್ ಮಾಡಿದ್ದವು. ಹ್ಯಾಕ್ ಮಾಡಲ್ಪಟ್ಟ ವಸ್ತುಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ತಮ್ಮ ಕ್ರಮಕ್ಕೆ ಫೇಸ್ಬುಕ್ ಹಾಗೂ ಟ್ವಿಟರ್ ವಿವರಣೆ ಕೊಟ್ಟುಕೊಂಡಿದ್ದವು.
ಈ ಮೂಲಕ ತಮ್ಮನ್ನು ಒಬ್ಬ ಹ್ಯಾಕರ್ ಎಂದು ಜಗತ್ತಿಗೆ ಪರೋಕ್ಷವಾದ ತಪ್ಪು ಸಂದೇಶದವನ್ನು ಕೊಡುವ ಮೂಲಕ ತನ್ನ ಆತ್ಮಗೌರವಕ್ಕೆ ಚ್ಯುತಿ ಆಗಿದೆ ಎಂದು ಆಪಾದಿಸಿರುವ ದಿ ಮ್ಯಾಕ್ ಶಾಪ್ ಮಾಲೀಕ ಜಾನ್ ಪಾಲ್, ಟ್ವಿಟರ್ ವಿರುದ್ಧ $500 ದಶಲಕ್ಷ ಪರಿಹಾರ ಕೋರಿ ದಾವೆ ಹೂಡಿದ್ದಾರೆ.