ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಅನೇಕ ದೇಶಗಳ ಲಸಿಕೆಗಳು ಸಿದ್ಧವಾಗಿದ್ದು ಪ್ರಯೋಗದ ಅಂತಿಮ ಹಂತದಲ್ಲಿದೆ. ಲಸಿಕೆ ರೆಡಿಯಾದ ನಂತರ ಅದನ್ನು ಖರೀದಿಸಿ ಅಗತ್ಯವಾಗಿರುವ ಬಡದೇಶಗಳಿಗೆ ಸಮಪ್ರಮಾಣದಲ್ಲಿ ವಿತರಣೆ ಮಾಡುವುದಾಗಿ ವಿಶ್ವಸಂಸ್ಥೆಯ ಮಕ್ಕಳ ನಿಧಿ ವಿಭಾಗ ಯುನಿಸೆಫ್ ಮಾಹಿತಿ ನೀಡಿದೆ.
ಖರೀದಿ ಸಾಮರ್ಥ್ಯವನ್ನು ಹೊಂದಿರುವ ಬಲಾಡ್ಯ ದೇಶಗಳು ಲಸಿಕೆ ಮೇಲೆ ನಿಯಂತ್ರಣ ಸಾಧಿಸುವ ಸಾಧ್ಯತೆ ಇದ್ದು, ಇದರಿಂದ ಬಡ ದೇಶಗಳಿಗೆ ವಂಚನೆ ಆಗಬಹುದು. ಈ ಕಾರಣದಿಂದ ವಿಶ್ವಸಂಸ್ಥೆ ಮಕ್ಕಳ ನಿಧಿ ವಿಭಾಗ ಯುನಿಸೆಫ್ ಬಹುಪಾಲು ಕೋವಿಡ್ ಲಸಿಕೆಯನ್ನು ಖರೀದಿಸಿ ವಿತರಣೆ ಮಾಡಲಿದೆ.
ಯುನಿಸೆಫ್ ವತಿಯಿಂದ ಈ ಕುರಿತು ಮಾಹಿತಿ ನೀಡಲಾಗಿದ್ದು, ಬಲಾಢ್ಯ ದೇಶಗಳು ಲಸಿಕೆ ಮೇಲೆ ನಿಯಂತ್ರಣ ಸಾಧಿಸುವುದನ್ನು ತಪ್ಪಿಸಲು ನಾವೇ ಲಸಿಕೆಯನ್ನು ಖರೀದಿಸಿ ವಿತರಿಸುತ್ತೇವೆ. ಬಡದೇಶಗಳಿಗೆ ಸಮಪ್ರಮಾಣದಲ್ಲಿ ಲಸಿಕೆ ವಿತರಿಸುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಯುನಿಸೆಫ್ ತಿಳಿಸಿದೆ.