ಸಾಮಾನ್ಯವಾಗಿ ಈ ನಾಯಿಗಳು ಕಪ್ಪು, ಬಿಳಿ , ಕಂದು ಬಣ್ಣದಲ್ಲಿ ಇರೋದನ್ನ ನೋಡಿರ್ತೇವೆ . ಆದರೆ ಇಟಲಿಯಲ್ಲಿ ನಾಯಿಯೊಂದು ಹಸಿರು ಬಣ್ಣದ ಮರಿಗೆ ಜನ್ಮ ನೀಡಿದೆ.
ಇಟಾಲಿಯನ್ ರೈತ ಕ್ರಿಸ್ಟಿಯನ್ ಮೆಲ್ಲೊಕಿ ತಮ್ಮ ತೋಟದಲ್ಲಿ 8 ನಾಯಿಗಳನ್ನ ಸಾಕಿದ್ರು. ಇದರಲ್ಲಿ ಸ್ಪೆಲಾಚಿಯಾ ಎಂಬ ಹೆಸರಿನ ನಾಯಿ 5 ಮರಿಗಳಿಗೆ ಜನ್ಮ ನೀಡಿದೆ.
ಇದರಲ್ಲಿ ಒಂದು ನಾಯಿಮರಿ ಮಾತ್ರ ಹಸಿರು ಬಣ್ಣದ್ದಾಗಿದೆ. ಉಳಿದ ನಾಲ್ಕು ಮರಿಗಳು ಅಮ್ಮನಂತೆ ಬಿಳಿ ಬಣ್ಣವನ್ನ ಹೊಂದಿದೆ. ಹಸಿರು ಬಣ್ಣದ ನಾಯಿಯನ್ನ ಕಂಡು ಆಶ್ಚರ್ಯಕ್ಕೊಳಗಾದ ಕ್ರಿಸ್ಟಿಯನ್ ಮೆಲ್ಲೋಕಿ ಈ ಮರಿಗೆ ಪಿಸ್ತಾ ಅಂತಾ ನಾಮಕರಣ ಮಾಡಿದ್ದಾರೆ.
ಹಸಿರು ಬಣ್ಣದ ಚರ್ಮ ಹೊಂದಿರುವ ನಾಯಿ ಜನಿಸೋದು ಅತ್ಯಂತ ಅಪರೂಪ. ತಾಯಿಯ ಗರ್ಭದಲ್ಲಿದ್ದಾಗ ಬಿಲಿವರ್ಡಿನ್ ಎಂಬ ಹಸಿರು ದ್ರವ್ಯದೊಂದಿಗೆ ಸಂಪರ್ಕ ಹೊಂದಿದಾಗ ಮರಿಗಳ ಚರ್ಮದ ಬಣ್ಣ ಈ ಬಣ್ಣಕ್ಕೆ ತಿರುಗುತ್ತೆ. ಹಾಗಂತ ಈ ವಿಚಿತ್ರ ಬಣ್ಣ ಶಾಶ್ವತವಾಗಿ ಉಳಿಯೋದಿಲ್ಲ. ಹುಟ್ಟಿದ ದಿನ ಗಾಢ ಹಸಿರು ಬಣ್ಣವಿದ್ದ ಈ ನಾಯಿ ಕ್ರಮೇಣವಾಗಿ ಮಂದವಾಗ್ತಿದೆ. ಪಿಸ್ತಾ ದೊಡ್ಡವನಾಗ್ತಿದ್ದಂತೆ ಬಿಳಿಯ ಬಣ್ಣಕ್ಕೆ ತಿರುಗಲಿದ್ದಾನೆ.