ಬ್ರಿಟನ್‌ನ ಕೋವಿಡ್-19 ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅವಧಿ ಆಸ್ಪತ್ರೆಯಲ್ಲಿ ಕಾಲ ಕಳೆದ ಸೋಂಕಿತರೊಬ್ಬರು, 95 ದಿನಗಳ ಹೋರಾಟದ ಬಳಿಕ ಕೊನೆಗೂ ಚೇತರಿಸಿಕೊಂಡು ತಮ್ಮ ಕುಟುಂಬಸ್ಥರನ್ನು ಮತ್ತೆ ಕೂಡಿಕೊಂಡಿದ್ದಾರೆ.
ಕೀತ್ ವಾಟ್ಸನ್ ಹೆಸರಿನ ಈ ವ್ಯಕ್ತಿ ತಮಗೆ ಸೋಂಕು ತಗುಲಿದ ಬಳಿಕ 23 ದಿನಗಳ ಕಾಲ ಕೋಮಾದಲ್ಲಿ ಕಳೆದು, 41 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಬೇಕಾಗಿ ಬಂದಿತ್ತು. ಒಂದು ಹಂತದಲ್ಲಂತೂ ಖುದ್ದು ವೈದ್ಯರುಗಳೇ ಈತ ಬದುಕುಳಿಯುವುದಿಲ್ಲ ಎಂದು ಹೇಳಿಬಿಟ್ಟಿದ್ದರು.
ಆದರೆ ಇಷ್ಟೆಲ್ಲಾ ನಿರಾಶಾದಾಯಕ ಪರಿಸ್ಥಿತಿಯ ನಡುವೆಯೂ ವಾಟ್ಸನ್ ಸೋಂಕಿನ ವಿರುದ್ಧದ ತಮ್ಮ ಹೋರಾಟದಲ್ಲಿ ಗೆಲುವು ಕಂಡಿದ್ದು, ಮೂರು ತಿಂಗಳ ಬಳಿಕ ಕೊನೆಗೂ ಮನೆಗೆ ಆಗಮಿಸಿದ್ದು, ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ಎಲ್ಲರಿಗೂ ಧೈರ್ಯ ತುಂಬುವಂಥ ಉದಾಹರಣೆಯಾಗಿದ್ದಾರೆ.
ವಾಟ್ಸನ್ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಗೊಂಡ ಕಾಲಾವಧಿಯಲ್ಲಿ, ಬ್ರಿಟನ್‌ನ 3,06,000ಕ್ಕೂ ಹೆಚ್ಚು ಮಂದಿ ಕೋವಿಡ್-19 ಪಾಸಿಟಿವ್ ಕಂಡುಬಂದು ಆಸ್ಪತ್ರೆಗೆ ದಾಖಲಾಗಿದ್ದಲ್ಲದೇ, 43,000+ ಮಂದಿ ಇದೇ ಕಾರಣಕ್ಕೆ ಪ್ರಾಣವನ್ನೂ ಬಿಟ್ಟಿದ್ದಾರೆ.