ಈಜಿಪ್ಟ್ ನಲ್ಲಿ ಉಕ್ರೇನಿಯನ್ ಯುವ ಪ್ರವಾಸಿಗ ಶಾರ್ಕ್ ದಾಳಿಗೆ ತುತ್ತಾಗಿ ತನ್ನ ಕೈ ತೋಳನ್ನು ಕಳೆದುಕೊಂಡ ಘಟನೆ ನಡೆದಿದೆ. ಇದೇ ಘಟನೆಯಲ್ಲಿ ಈಜಿಪ್ಟ್‌ನ ಟೂರ್ ಗೈಡ್ ಕಾಲಿಗೂ ಗಂಭೀರ ಹಾನಿಯಾಗಿದೆ.
ರಾಸ್ ಮೊಹಮ್ಮದ್ ರಾಷ್ಟ್ರೀಯ ಉದ್ಯಾನದಲ್ಲಿ ತಾಯಿ ಮತ್ತು ಮಗ ತಮ್ಮ ಪ್ರವಾಸಿ ಗೈಡ್ ಜತೆ ಸ್ನಾರ್ಕ್ಲಿಂಗ್ ಮಾಡುತ್ತಿದ್ದಾಗ ಶಾರ್ಕ್ ದಾಳಿ ನಡೆದಿದೆ ಎಂದು ಆ ದೇಶದ ಪರಿಸರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಪ್ರಾಥಮಿಕ ತನಿಖೆಯ ಪ್ರಕಾರ 2 ಮೀಟರ್ ಉದ್ದದ ಓಷಿಯಾನಿಕ್ ವೈಟ್‌ಟಿಪ್ ಶಾರ್ಕ್ ದಾಳಿ ನಡೆಸಿದೆ ಎಂಬುದು ಗೊತ್ತಾಗಿದೆ.
12 ವರ್ಷದ ಬಾಲಕ ತೀವ್ರ ನಿಗಾದಲ್ಲಿದ್ದು, ಶಸ್ತ್ರಚಿಕಿತ್ಸೆ ನಡೆಸಿದರೂ ಆತನ ತೋಳನ್ನು ಉಳಿಸುವ ಪ್ರಯತ್ನ ವಿಫಲವಾಗಿದೆ. ಆತನ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಾರ್ಗದರ್ಶಿಯ ಕಾಲಿಗೆ ಹೆಚ್ಚಿನ ಹಾನಿಯಾಗಿದೆ.
ದಾಳಿ ನಡೆದ ರಾಸ್ ಮೊಹಮ್ಮದ್ ರಾಷ್ಟ್ರೀಯ ಉದ್ಯಾನವನದ ಪ್ರದೇಶವನ್ನು ಅಧಿಕಾರಿಗಳು ಸದ್ಯಕ್ಕೆ ಮುಚ್ಚಿದ್ದಾರೆ.