ಶಾಲೆಯಲ್ಲಿ ತನ್ನನ್ನು ರೇಗಿಸುತ್ತಿದ್ದ ಸ್ನೇಹಿತರಿಂದ ತಪ್ಪಿಸಿಕೊಳ್ಳಲು ಹೋಗಿ ಶೌಚಾಲಯ ಹೊಕ್ಕ ವಿದ್ಯಾರ್ಥಿಯೊಬ್ಬ ಮೂರು ದಿನಗಳ ಕಾಲ ಅಲ್ಲೇ ಉಳಿದಿದ್ದ.
ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯ ಪೋಷಕರು – ಶಾಲಾ ಆಡಳಿತ ಮಂಡಳಿ ಮಧ್ಯೆ ಕಿತ್ತಾಟಕ್ಕೂ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆಯನ್ನೂ ಶಾಲೆ ನೀಡಿದೆ.
ಇಂಗ್ಲೆಂಡಿನ ಕೋಥಮ್ ಶಾಲೆಯಲ್ಲಿ ಓದುತ್ತಿದ್ದ ಹುಡುಗನಿಗೆ ದಿನೇ ದಿನೇ ಪೀಡಿಸುವ ಗೆಳೆಯರ ಕಾಟ ಹೆಚ್ಚಾಗಿದೆ. ದಿಕ್ಕು ತೋಚದೆ ಶೌಚಾಲಯ ಸೇರಿದ್ದಾನೆ. ಶಾಲೆಯ ಅವಧಿ ಮುಗಿದರೂ ಹೊರಗೇ ಬಂದಿಲ್ಲ. ಸಿಬ್ಬಂದಿಯೂ ಗಮನಿಸದೆ ಲಾಕ್ ಮಾಡಿದ್ದಾರೆ. ನಂತರದ ಎರಡು ದಿನ ಕೂಡ ಆತ ಹೊರಗೇ ಬಂದಿಲ್ಲ.
ತರಗತಿಯಲ್ಲಿ ಹಾಜರಾತಿ ಕರೆದಾಗ ಕಾಣಿಸದೇ ಇದ್ದರಿಂದ ಅನುಮಾನಗೊಂಡ ಶಿಕ್ಷಕರು ಪೋಷಕರಲ್ಲಿ ವಿಚಾರಿಸಿದಾಗ ಆತ ಮನೆಯಲ್ಲೂ ಇಲ್ಲದಿರುವುದು ಗೊತ್ತಾಗಿದೆ. ಕೊನೆಗೆ ಎಲ್ಲ ಕಡೆ ಹುಡುಕಾಟ ನಡೆಸಿದ ನಂತರ, ಹೆದರಿ ಶೌಚಾಲಯ ಹೊಕ್ಕಿದ್ದ ವಿದ್ಯಾರ್ಥಿ ಹೊರಬಂದಿದ್ದಾನೆ.
ಮಗು ಸಿಕ್ಕಿದ ಖುಷಿ ಒಂದೆಡೆಯಾದರೆ, ಮೂರು ದಿನವಾದರೂ ವಿಚಾರ ತಿಳಿಸದೆ ಆತನನ್ನು ಶೌಚಾಲಯದಲ್ಲೇ ಇರುವಂತೆ ಮಾಡಿದ ಶಾಲೆಯ ವಿರುದ್ಧ ಪೋಷಕರು ಜಗಳಕ್ಕೆ ಬಿದ್ದಿದ್ದಾರೆ.
ಸ್ಪಷ್ಟನೆ ನೀಡಿರುವ ಶಾಲೆಯ ಆಡಳಿತ ಮಂಡಳಿ, ನಮ್ಮ ನೀತಿಯ ಪ್ರಕಾರ ಮಗು ಗೈರುಹಾಜರಾದ ಮೊದಲ ದಿನವೇ ಪೋಷಕರಿಗೆ ಸಂದೇಶ ರವಾನಿಸುತ್ತೇವೆ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ ಪೋಷಕರೇ ಶಾಲೆಗೆ ಬಂದು ಸಂಬಂಧಿಸಿದವರನ್ನು ಸಂಪರ್ಕಿಸಬೇಕು. ಶಾಲೆಯ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ವಿದ್ಯಾರ್ಥಿಗೆ ಕಾಟ ಕೊಟ್ಟವರ ಪತ್ತೆ ಹಾಗೂ ಶಿಕ್ಷೆ ನೀಡುವ ಸಲುವಾಗಿ ತನಿಖೆ ಮಾಡುವ ಭರವಸೆ ಕೊಟ್ಟಿದೆ.