ಕೊರೋನಾದಿಂದಾಗಿ ಕೈಕುಲುಕುವುದು, ತಬ್ಬಿಕೊಳ್ಳುವ ಸಂಸ್ಕೃತಿಗಳು ಮರೆಯಾಗಿ ಭಾರತದ ನಮಸ್ತೆ ಸಂಸ್ಕೃತಿಯೇ ಇಡೀ ಜಗತ್ತಿನ ಜೀವನಪದ್ಧತಿ ಆಗಿಬಿಟ್ಟಿದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ಸ್ ಲಂಡನ್ ಪ್ರವಾಸದಲ್ಲಿದ್ದು, ಯುಕೆ ಪ್ರಧಾನಿಯನ್ನು ಎದುರುಗೊಂಡಾಗ ಕೈಕುಲುಕಲಿಲ್ಲ, ಬಾಚಿ ತಬ್ಬಿಕೊಳ್ಳಲಿಲ್ಲ. ಬದಲಿಗೆ ದೂರದಿಂದಲೇ ನಮಸ್ತೆ ಮಾಡಿದರು.
ಎರಡನೇ ವಿಶ್ವ ಯುದ್ಧದ ಸ್ಮರಣಾರ್ಥ ಲಂಡನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಹಾಗೂ ಯುಕೆ ಪ್ರಧಾನಿ ಬೊರಿಸ್ ಜಾನ್ ಸನ್ ಮುಖಾಮುಖಿಯಾದರು.
ಮಾಧ್ಯಮಗಳು ಕೂಡ ಇಬ್ಬರು ನಾಯಕರ ಭೇಟಿಯ ಕ್ಷಣಗಳನ್ನು ಸೆರೆಹಿಡಿಯಲು ಉತ್ಸುಕವಾಗಿದ್ದವು. ಇನ್ನೇನು ಇಬ್ಬರೂ ಕೈಕುಲುಕುತ್ತಾರೆ ಎಂದುಕೊಳ್ಳುವಷ್ಟರಲ್ಲಿ ಒಂದು ಹೆಜ್ಜೆ ಹಿಂದೆ ಹೋಗಿ, ಪರಸ್ಪರ ನಮಸ್ಕಾರ ವಿನಿಮಯ ಮಾಡಿಕೊಂಡರು. ಮಾಧ್ಯಮಗಳ ಫೋಟೋಗೆ ಪೋಸು ಕೊಡುವಾಗಲೂ ಇಬ್ಬರೂ ಹತ್ತಿರ ಬರಲಿಲ್ಲ. ಬದಲಾಗಿ ಅಂತರ ಕಾಯ್ದುಕೊಂಡೇ ನಿಂತರು.
ಯುಕೆ ಪ್ರಧಾನಿ ಜಾನ್ ಸನ್ ಅವರು ಸ್ವತಃ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೆಲ್ ಕಮ್ ಟು ಡೌನಿಂಗ್ ಸ್ಟ್ರೀಟ್, ಪ್ರೆಸಿಡೆಂಟ್ ಎಂದು ಪೋಸ್ಟ್ ಮಾಡಿದ್ದಾರೆ.