ಲಂಡನ್: ಕೋವಿಡ್-19 ಇಡೀ ವಿಶ್ವವನ್ನು ತಲ್ಲಣ ಮಾಡಿದೆ. ರೋಗ ಹಾಗೂ ರೋಗಿಗಳ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ ಜಗತ್ತಿನ ಅತಿ ಮುಂದುವರಿದ ದೇಶಗಳಲ್ಲೇ ರೋಗಿಗಳ ಕೋವಿಡ್ ಪರೀಕ್ಷೆಯ ದಾಖಲೆಯನ್ನು ಸರಿಯಾಗಿ ಇಡಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯುನೈಟೆಡ್ ಕಿಂಗ್ಡಮ್ ನ ರಾಷ್ಟ್ರೀಯ ದಾಖಲಾತಿಯಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಕೋವಿಡ್-19 ಪರೀಕ್ಷೆಯ ಮಾಹಿತಿ ಕಳೆದು ಹೋಗಿದೆ.
ಎಕ್ಸಲ್ ಶೀಟ್ ಎರರ್ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯುಕೆ ನ್ಯಾಷನಲ್ ಟ್ರ್ಯಾಕ್ ರೆಕಾರ್ಡ್‌ನ್ನು ಮೈಕ್ರೊಸಾಫ್ಟ್ ಎಕ್ಸ್‌ಲ್‌ನಲ್ಲಿ ದಾಖಲಿಸಲಾಗುತ್ತಿತ್ತು. ಎಕ್ಸಲ್ ಸ್ಪ್ರೆಡ್ ಶೀಟ್‌ನಲ್ಲಿ ಗರಿಷ್ಠ 1 ಮಿಲಿಯನ್ ಕಾಲಂಗಳಲ್ಲಿ ಡೇಟಾಗಳನ್ನು ದಾಖಲಿಸಬಹುದಾಗಿದೆ. ಆದರೆ, ಯುಕೆಯ ನ್ಯಾಷನಲ್ ಟ್ರ್ಯಾಕ್ ರೆಕಾರ್ಡ್ ಬಳಸುತ್ತಿರುವ ಎಕ್ಸಲ್ ಶೀಟ್ ತನ್ನ ಗರಿಷ್ಠ ಮಿತಿಯನ್ನು ಮೀರಿದೆ.
ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ರವರೆಗೆ ಪರೀಕ್ಷೆ ಮಾಡಿದ 15,841 ಜನರ ದಾಖಲೆ ಕಾಣೆಯಾಗಿದೆ. ಸಿಎಸ್‌ವಿ ಫೈಲ್ ಮಾದರಿಯಲ್ಲಿ ಬಂದ ಕೋವಿಡ್ ಪರೀಕ್ಷಾ ವರದಿಯ ಲಿಸ್ಟ್‌ನ್ನು ನೇರವಾಗಿ ಮೈಕ್ರೊಸಾಫ್ಟ್ ಎಕ್ಸಲ್‌ನಲ್ಲಿ ಹಾಕಲಾಗುತ್ತಿತ್ತು.
ಹೊಸ ಪರೀಕ್ಷಾ ವರದಿಗಳನ್ನು ಶೀಟ್‌ನ ಕೆಳಗಿರುವ ಮುಖ್ಯ ಡೇಟಾ ಬೇಸ್‌ಗೆ ಸೇರಿಸಲಾಗುತ್ತಿತ್ತು. ಆದರೆ, ಒಂದು ಹಂತದಲ್ಲಿ ಇದರಲ್ಲಿ ಉಂಟಾದ ಸಮಸ್ಯೆ ಅರಿವಿಗೆ ಬಂದಿಲ್ಲ ಎಂದು ಇಂಗ್ಲೆಂಡ್ ಪಬ್ಲಿಕ್ ಹೆಲ್ತ್ ವಿಭಾಗದ ವಕ್ತಾರೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.