ಕೊರೋನಾ ಬಂದಾಗಿನಿಂದಲೂ ನಿಯಮ ಉಲ್ಲಂಘನೆ ಮತ್ತು ದಿನಕ್ಕೊಂದು ನಿಯಮ ಬದಲಾವಣೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಯುಕೆಯಲ್ಲೂ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ.
ಕೊರೋನಾ ಶಿಷ್ಟಾಚಾರ ಉಲ್ಲಂಘಿಸಿದ ಮಹಿಳೆಯರಿಬ್ಬರಿಗೆ ಯುಕೆ ಪೊಲೀಸರು ವಿಧಿಸಿದ್ದ ದಂಡ ಹಿಂಪಡೆದದ್ದೂ ಅಲ್ಲದೆ ಕ್ಷಮೆ ಕೂಡ ಕೇಳಿದ್ದಾರೆ.
ಜೆಸ್ಸಿಕಾ ಅಲೆನ್, ಎಲಿಜಾ ಮೂರ್ ಎಂಬಿಬ್ಬರು ಸ್ನೇಹಿತರು ವಾಯುವಿಹಾರಕ್ಕೆಂದು ಜನಜಂಗುಳಿ ಇಲ್ಲದ ಏಕಾಂತ ಸ್ಥಳ ಹುಡುಕಿ ಹೊರಟಿದ್ದರು. ಕಾರು ಚಲಾಯಿಸಿಕೊಂಡು ಹೋಗುವಾಗ 5 ಮೈಲಿ ದೂರದಲ್ಲಿರುವ ಫೋರ್ ಮಾರ್ಕ್ ಜಲಾಶಯಕ್ಕೆ ಭೇಟಿ ನೀಡಿದರು.
ಇಬ್ಬರನ್ನು ಕಂಡ ಪೊಲೀಸರು, ಕೊರೋನಾ ನಿಯಮ ಉಲ್ಲಂಘಿಸಿ ಪಿಕ್ ನಿಕ್ ಬಂದಿದ್ದೀರಿ. 5 ಮೈಲಿ ಪ್ರಯಾಣ ಮಾಡಿರುವುದೂ ತಪ್ಪು. ಇಬ್ಬರ ಕೈಯಲ್ಲೂ ಬಿಸಿ ಬಿಸಿ ಚಹಾ ಇರುವುದರಿಂದ ಇದನ್ನು ಪಿಕ್ ನಿಕ್ ಎಂದು ಪರಿಗಣಿಸಲಾಗಿದೆ ಎಂದು ತಲಾ 200 ಪೌಂಡ್ ದಂಡ ವಿಧಿಸಿದ್ದರು.
ಇದಕ್ಕೆ ಸಮಜಾಯಿಷಿ ಕೊಟ್ಟಿದ್ದ ಜೆಸ್ಸಿಕಾ, ಇಬ್ಬರೂ ಬೇರೆ ಬೇರೆ ಕಾರಿನಲ್ಲಿ ಬಂದಿದ್ದೇವೆ. ಮಾಸ್ಕ್ ಧರಿಸಿದ್ದೇವೆ ಎಂದಿದ್ದರು. ಸಾಲದ್ದಕ್ಕೆ ಪ್ರಯಾಣಕ್ಕೆ ಇಷ್ಟೇ ದೂರ ಎಂಬ ನಿರ್ಬಂಧ ಸಡಿಲಿಸಲಾಗಿದೆ ಎಂದು ಸರ್ಕಾರವೂ ಆದೇಶಿಸಿತ್ತು. ಹೀಗಾಗಿ ಡರ್ಬಿಶೈರ್ ಪೊಲೀಸರು ದಂಡದ ಮೊತ್ತ ಹಿಂದಿರುಗಿಸಿ, ಇಬ್ಬರ ಕ್ಷಮೆಯನ್ನೂ ಕೇಳಿದ್ದಾರೆ.