ಆನ್ಲೈನ್ ಮೂಲಕ ವರ್ಚುವಲ್ ಮೀಟಿಂಗ್ ಮಾಡುವ ವೇಳೆ ನಿಮ್ಮ ಮೊಬೈಲ್/ಪಿಸಿಯ ಕ್ಯಾಮೆರಾ ಆಫ್ ಮಾಡಿದಲ್ಲಿ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸುತ್ತಿದೆ.
ವೆಬ್ ಕಾಲಿಂಗ್ ವೇಳೆ ಕ್ಯಾಮೆರಾ ಸ್ವಿಚ್ ಆಫ್ ಮಾಡುವುದಿಂದ ಇಂಗಾಲ ಹೊರಸೂಸುವಿಕೆಯನ್ನು 96%ನಷ್ಟು ತಗ್ಗಿಸಬಹುದು ಎಂದು ’ರಿಸೋರ್ಸಸ್, ಕನ್ಸರ್ವೇಷನ್ ಅಂಡ್ ರಿಸೈಕ್ಲಿಂಗ್’ ಹೆಸರಿನ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ವರದಿ ತಿಳಿಸುತ್ತದೆ.
“ನೀವು ಬರೀ ಒಂದು ರೀತಿಯ ಮಾಲಿನ್ಯಕಾರಕದ ಬಗ್ಗೆ ಯೋಚಿಸಿದಲ್ಲಿ, ಪರಿಸರದ ಮೇಲೆ ಪರಿಣಾಮ ಬೀರುವ ಇತರ ಮಾಲಿನ್ಯಕಾರಕಗಳ ಬಗ್ಗೆ ತಿಳಿದುಕೊಳ್ಳಲು ವಿಫಲರಾಗುವಿರಿ” ಎನ್ನುತ್ತಾರೆ ಅಮೆರಿಕದ ಪ್ರೂಡ್ ವಿವಿಯ ಪ್ರಾಧ್ಯಾಪಕ ಹಾಗೂ ಸಂಶೋಧಕ ರೋಶನಾಕ್ ’ರೋಶಿ’ ನಟೇಗಿ.
ನೆಟ್‌ಫ್ಲಿಕ್ಸ್‌ನಂಥ ಅಪ್ಲಿಕೇಶನ್‌ಗಳಲ್ಲಿ ಬರುವ ವಿಡಿಯೋಗಳನ್ನು ಹೈ-ಡೆಫನಿಷನ್ ಬದಲು ಸ್ಟಾಂಡರ್ಡ್ ಡೆಫನಿಷನ್‌ನಲ್ಲಿ ನೋಡುವ ಮೂಲಕ ಇಂಗಾಲ ಹೊರಸೂಸುವಿಕೆಯಲ್ಲಿ 86%ನಷ್ಟು ಇಳಿಕೆ ಮಾಡಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅಧ್ಯಯನದ ಉದ್ದೇಶಕ್ಕೆಂದು, ಯೂಟ್ಯೂಬ್, ಜೂಮ್, ಫೇಸ್ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್, ಟಿಕ್‌ಟಾಕ್ ಹಾಗೂ ಇತರ 12 ಪ್ಲಾಟ್‌ಫಾರಂಗಳ ಮೂಲಕ ಬಳಕೆ ಮಾಡಲ್ಪಡುವ ಪ್ರತಿಯೊಂದು ಜಿಬಿ ಡೇಟಾ ಎಷ್ಟರ ಮಟ್ಟಿಗೆ ಇಂಗಾಲದ ಹೊರಸೂಸುವಿಕೆ ಸಂಭವಿಸಿ, ಇದು ನೆಲ, ಜಲ ಹಾಗೂ ಗಾಳಿಯ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂದು ಪ್ರಯೋಗದಲ್ಲಿ ನೋಡಿದೆ.
ನಿರೀಕ್ಷೆಯಂತೆಯೇ ಯಾವುದೇ ಅಪ್ಲಿಕೇಶನ್ ಮೂಲಕ ಹೆಚ್ಚು ವಿಡಿಯೋ ವೀಕ್ಷಿಸಿದಷ್ಟೂ ಇಂಗಾಲದ ಹೊರಸೂಸುವಿಕೆ ಹೆಚ್ಚಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.