ತುರ್ಕಮೇನಿಸ್ತಾನ ಅಧ್ಯಕ್ಷ ಗುರ್ಬಂಗುಲಿ ಬರ್ಡಿಮುಖಾಮೆಡೋವ್ ತಮ್ಮ ಶ್ವಾನ ಪ್ರೀತಿಯ ಮೂಲಕ ವಿಶ್ವದಲ್ಲಿ ಸುದ್ದಿಯಾಗಿದ್ದಾರೆ. ಅದರಲ್ಲೂ ಮಧ್ಯ ಏಷಿಯನ್ ಶೆಪರ್ಡ್ ಶ್ವಾನ ತಳಿ ಅಥವಾ ಅಲಬೈ ಎಂಬ ಶ್ವಾನದಿಂದ ಫುಲ್ ಫೇಮಸ್ ಆಗಿದ್ದಾರೆ.
ಈಗಾಗಲೇ ಈ ನಾಯಿಯ ತಳಿಯನ್ನ ಗೌರವಿಸೋಕೆ ಬೃಹತ್ ಪ್ರತಿಮೆ ನಿರ್ಮಾಣ ಮಾಡಿದ್ದ ಗುರ್ಬಂಗುಲಿ ಬರ್ಡಿಮುಖಾಮೆಡೋವ್ ಇದೀಗ ಮತ್ತೊಂದು ಕ್ರಮಕ್ಕೆ ಮುಂದಾಗಿದ್ದಾರೆ. ಅದೆನೆಂದರೆ ಈ ಶ್ವಾನಗಳಿಗಾಗಿ ರಾಷ್ಟ್ರಾದ್ಯಂತ ಸರ್ಕಾರಿ ರಜೆಯೊಂದನ್ನ ಘೋಷಿಸಿದ್ದಾರೆ.
ಪ್ರತಿ ವರ್ಷ ಏಪ್ರಿಲ್ನ ಕೊನೆಯ ರವಿವಾರ ಈ ಶ್ವಾನದ ತಳಿಗಳಿಗೆ ಗೌರವ ನೀಡುವ ಸಲುವಾಗಿ ಸರ್ಕಾರಿ ರಜೆ ನೀಡಲಾಗಿದೆ. ಮಧ್ಯ ಏಷ್ಯಾ ಶೆಪರ್ಡ್ ಶ್ವಾನಗಳು ಹೆಚ್ಚಾಗಿ ರಷ್ಯಾ ಹಾಗೂ ಇತರೆ ಏಷಿಯನ್ ದೇಶಗಳಲ್ಲಿ ಕಂಡು ಬರುತ್ತವೆ. ಏಷ್ಯಾದ ಖ್ಯಾತ ಶ್ವಾನ ತಳಿಗಳ ಪೈಕಿ ಇವೂ ಒಂದಾಗಿವೆ.
ಗುರ್ಬಂಗುಲಿ ಬರ್ಡಿಮುಖಾಮೆಡೋವ್‌ಗೆ ಅಲಬೈ ಮೇಲಿನ ಪ್ರೀತಿ ಹೊಸ ಸಂಗತಿಯಲ್ಲ. ಕಳೆದ ವರ್ಷ ಅವರು ದೇಶದ ರಾಜಧಾನಿ ಅಶ್ಗಾಬತ್‌ನಲ್ಲಿ 15 ಮೀಟರ್ ಉದ್ದದ ಪ್ರತಿಮೆಯನ್ನು ಉದ್ಘಾಟಿಸಿದರು. ಅಷ್ಟೇ ಅಲ್ಲ, ಅವರು ಶ್ವಾನಕ್ಕಾಗಿ ಪುಸ್ತಕವನ್ನು ಪ್ರಕಟಿಸಿದರು ಮತ್ತು ನಾಯಿ ತಳಿಯ ಬಗ್ಗೆ ಒಂದು ಹಾಡನ್ನು ಬರೆದಿದ್ದಾರೆ. 2019 ರಲ್ಲಿ ಅವರು ನಾಯಿಮರಿಯನ್ನು ರಷ್ಯಾದ ಪ್ರಧಾನಿ ವ್ಲಾಡಿಮಿರ್ ಪುಟಿನ್ ಮತ್ತು 2017 ರಲ್ಲಿ ಅಂದಿನ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ಗೆ ಉಡುಗೊರೆಯಾಗಿ ನೀಡಿದರು.