ಅಂಕರಾ: ಪುಸ್ತಕಗಳು ಎಂದರೆ ಜ್ಞಾನದ ಆಗರ. ಅವಕ್ಕೆ ಎಂದೂ ಅಂತ್ಯವಿಲ್ಲ. ಆದರೆ, ಪುಸ್ತಕದ ಮಹತ್ವ ಅರಿಯದ ಕೆಲ ಜನ ಬೇಡ ಎಂದು ಎಸೆದ ಪುಸ್ತಕಗಳೇ ಇಲ್ಲೊಂದು ಲೈಬ್ರರಿಯಾಗಿ ರೂಪುಗೊಂಡಿದೆ.
ಟರ್ಕಿ ದೇಶದ ರಾಜಧಾನಿ ನಗರ ಅಂಕರಾದಲ್ಲಿ ಈ ಅಪರೂಪದ ಗ್ರಂಥಾಲಯವಿದೆ. ಟರ್ಕಿಯ ಕಸ ಸಂಗ್ರಾಹಕರು ಸೇರಿ ಇದನ್ನು ರಚಿಸಿದ್ದು, 17 ವಿಭಾಗಗಳ ಸುಮಾರು 25 ಸಾವಿರ ಪುಸ್ತಕಗಳು ಸಂಗ್ರಹವಾಗಿವೆ. ಸುತ್ತಲಿನ ಪ್ರದೇಶಗಳ ಜನರು ಇಲ್ಲಿ ಬಂದು ಪುಸ್ತಕವನ್ನು ತೆಗೆದುಕೊಂಡು ಹೋಗುವಂತೆ ಗ್ರಂಥಾಲಯ ಆಡಳಿತ ಅವಕಾಶ ನೀಡಿದೆ.
ವಿಶೇಷ ಎಂದರೆ ಹಳೆಯ ಪುಸ್ತಕಗಳ ಈ ಗ್ರಂಥಾಲಯವನ್ನು ಹಳೆಯ ಕಾರ್ಖಾನೆ ಕಟ್ಟಡವೊಂದರಲ್ಲಿ ನಿರ್ಮಿಸಲಾಗಿದೆ. ಇಷ್ಟೇ ಅಲ್ಲದೆ ಟರ್ಕಿಯ ಕಸ ಸಂಗ್ರಾಹಕರು ಹಳೆಯ ಟ್ರಕ್ ಒಂದರಲ್ಲಿ ಸಂಚಾರಿ ಗ್ರಂಥಾಲಯ ಪ್ರಾರಂಭಿಸಿದ್ದು, ಪುಸ್ತಕಗಳ ಸಂಗ್ರಹ ಪ್ರಾರಂಭಿಸಿದ್ದಾರೆ.