ಮಂಗೋಲಿಯಾದ ಆರ್ಗಲಿ ತಳಿಯ ಕುರಿ ಬೇಟೆಯಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿರಿಯ ಪುತ್ರ ಹಾಗೂ ಮೊಮ್ಮಗ ಮಾಡಿದ ಖರ್ಚೆಷ್ಟು ಗೊತ್ತೇ… ಗೊತ್ತಾದರೆ ಹೌಹಾರುವಿರಿ.
ಹೌದು, ಇವರುಗಳು ಬರೋಬ್ಬರಿ 75 ಸಾವಿರ ಡಾಲರ್ ಖರ್ಚು ಮಾಡಿದ್ದಾರೆ. ಇತ್ತೀಚೆಗೆ 8 ದಿನಗಳ ಮಂಗೋಲಿಯಾ ಪ್ರವಾಸ ನಡೆಸಿದ್ದ ಜೂನಿಯರ್ ಟ್ರಂಪ್, ರಹಸ್ಯ ಸೇವಾ ರಕ್ಷೆ ಅಡಿ 76,859 ಡಾಲರ್ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.
ಇದಿಷ್ಟೂ ಸಾರ್ವಜನಿಕ ತೆರಿಗೆ ಹಣವಾಗಿದ್ದು, ಹೊಣೆಗಾರಿಕೆ ಮತ್ತು ನೈತಿಕತೆಗಾಗಿ ನಾಗರಿಕರು ಎಂಬ ಸರ್ಕಾರೇತರ ಸಂಸ್ಥೆ ಬಿಡುಗಡೆ ಮಾಡಿರುವ ದಾಖಲೆಗಳಿಂದ ಇದು ಬಹಿರಂಗವಾಗಿದೆ.
ಉದ್ದನೆಯ ಕೊಂಬುಳ್ಳ ಆರ್ಗಲಿ ಕುರಿ ಬೇಟೆಯ ಮೋಜಿಗಾಗಿ ಜನರ ತೆರಿಗೆ ಹಣ ವ್ಯಯಿಸಿದ್ದೂ ಅಲ್ಲದೆ, ನೆಪ ಮಾತ್ರಕ್ಕೆ ಮಂಗೋಲಿಯಾ ಅಧ್ಯಕ್ಷರನ್ನೂ ಭೇಟಿ ಮಾಡಿದ್ದಾರೆ. ಸಾಲದ್ದಕ್ಕೆ ದೈತ್ಯ ಕುರಿ ಹಾಗೂ ಬೇಟೆಯಾಡಿದ ಮೀನಿನ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೂನಿಯರ್ ಟ್ರಂಪ್, ಜನರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.
ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾರ ಕುಟುಂಬ ಇಷ್ಟೊಂದು ದುಂದು ವೆಚ್ಚ ಮಾಡಿಲ್ಲ. ಅವರ ಕುಟುಂಬಕ್ಕಿಂತ 10 ಪಟ್ಟು ಪ್ರವಾಸ, ಖರ್ಚನ್ನು ಟ್ರಂಪ್ ಪುತ್ರ ಮಾಡುತ್ತಲೇ ಇದ್ದಾರೆ ಎಂದು ವರದಿಯಾಗಿದೆ.