ವರ್ಷ ಕಳೆದರೂ ಈ ಕೊರೋನಾ ಸಾಂಕ್ರಮಿಕ ಯಾಕೋ ತೊಲಗುವಂತೆ ಸಧ್ಯಕ್ಕೆ ಕಾಣುತ್ತಿಲ್ಲ. ಸದ್ಯದ ಮಟ್ಟಿಗೆ ಇರುವ ಏಕೈಕ ದಾರಿ ಎಂದರೆ, ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕಿನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದು.
ಇದೀಗ ನಿಮ್ಮ ಕಾರಿನ ಕಿಟಕಿಗಳನ್ನು ತೆರೆದುಕೊಂಡೇ ಪ್ರಯಾಣ ಮಾಡುವುದರಿಂದ ಗಾಳಿ ಮೂಲಕ ಬರುವ ರೋಗಾಣುಗಳ ದೇಹ ಪ್ರವೇಶಿಸುವ ಸಾಧ್ಯತೆಗಳನ್ನು ಹೋಗಲಾಡಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಗಾಳಿ ಮುಖಾಂತರ ಹಬ್ಬಬಲ್ಲ ರೋಗಾಣುಗಳು, ಗಾಳಿಯ ಪ್ಯಾಸೇಜ್ ಸಿಕ್ಕ ಕೂಡಲೇ ನಮ್ಮ ದೇಹವನ್ನು ಪ್ರವೇಶ ಮಾಡಬಹುದಾಗಿದೆ. ಹೀಗಾಗಿ ಮರುಬಳಕೆ ಮಾಡಿದ ಗಾಳಿ ಆಡುವ ಸೀಮಿತ ಜಾಗದಲ್ಲಿ ಈ ರೋಗಾಣುಗಳು ದೇಹದೊಳಗೆ ಪ್ರವೇಶಿಸಬಹುದಾಗಿದೆ. ಸಿನೆಮಾ ಹಾಲ್ಗಳು ಹಾಗೂ ಮಾಲ್ಗಳಲ್ಲಿ ಈ ಸಾಧ್ಯತೆಗಳು ಇದ್ದು, ಅಲ್ಲಿಗೆ ಹೋಗುವುದನ್ನು ಹೇಗೋ ತಪ್ಪಿಸಿದರೂ ಸಹ ಕಾರಿನಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸುವುದು ಕಷ್ಟವಾಗಿದೆ.
ಕಾರಿನಲ್ಲಿ ಪಯಣಿಸುವ ವೇಳೆ ಕಿಟಕಿಗಳನ್ನು ತೆರೆದುಕೊಂಡು ಹೋಗುವುದರಿಂದ ಸಾರ್ಸ್-ಕೋವ್-2 ವೈರಾಣುಗಳು ಹಬ್ಬುವುದನ್ನು ತಡೆಗಟ್ಟಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಗಾಳಿ ಮೂಲಕ ಪಸರುವ ಯಾವುದೇ ವೈರಾಣುವಿಗೂ ಈ ಕ್ರಮ ಪ್ರತಿರೋಧಕವಾಗಿದೆ ಎಂದು ಅಮೆರಿಕದ ಬ್ರೌನ್ ವಿವಿಯ ಸಂಶೋಧಕರ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಸೈನ್ಸ್ ಅಡ್ವನ್ಸಸ್ ವಿಜ್ಞಾನದ ಜರ್ನರಲ್ನಲ್ಲಿ ಈ ಅಧ್ಯಯನದ ವರದಿ ಪ್ರಕಟಿಸಲಾಗಿದೆ.