ಈ 11 ತಿಂಗಳ ಹಸುಳೆಗೆ ತನ್ನ ಹೆಸರು ಕರೆದರೆ ತಿರುಗಿಯೂ ನೋಡುವುದಿಲ್ಲ. ಬದಲಿಗೆ ಬೇರೆ ಹೆಸರು ಕರೆದರೆ ತಿರುಗಿ ನಿಮ್ಮತ್ತ ನೋಡುತ್ತದೆ. ಅದರಲ್ಲೂ ಅಲೆಕ್ಸಾ ಎಂದರೆ ಸಾಕು, ಗಬಕ್ಕನೆ ತಿರುಗಿಬಿಡುತ್ತದೆ.
ಅಸಲಿಗೆ ಅಲೆಕ್ಸಾ ಎಂಬುದು ಅಮೆಜಾನ್ ನ ಉತ್ಪನ್ನದ ಹೆಸರು. ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ಈ ಎಲೆಕ್ಟ್ರಾನಿಕ್ ಪರಿಕರವು ನಮ್ಮ ಧ್ವನಿಯನ್ನು ಗ್ರಹಿಸಿ ಕೆಲಸ ಮಾಡುತ್ತದೆ.
ಕೇಳಿದ ಹಾಡು ಮೂಡಿಬರುತ್ತದೆ, ಸಂಗೀತ ವಾದ್ಯಗಳ ನಾದ ಹೊಮ್ಮುತ್ತದೆ, ಸುದ್ದಿ ಸಮಾಚಾರಗಳನ್ನು ಕೇಳಿದರೆ ತಿಳಿಸುತ್ತದೆ…….ಹೀಗಾಗಿ ಮನೆಯಲ್ಲಿರುವವರು ಈ ಅಲೆಕ್ಸಾ ಮೇಲೆ ಭಾರೀ ಅವಲಂಬಿತರಾಗಿದ್ದಾರೆ.
ದಿನದ 24 ಗಂಟೆಯೂ ಅಲೆಕ್ಸಾ ಅದು ಮಾಡು, ಇದು ಮಾಡು. ಇದು ಬೇಡ, ಅದು ಬೇಕು ಎಂದು ಹೇಳುತ್ತಲೇ ಇರುತ್ತಾರೆ.
ಹೀಗಾಗಿ ಅಲೆಕ್ಸಾ ಎಂಬುದೇ ತನ್ನ ಹೆಸರು ಎಂದು ಭಾವಿಸಿರುವ ಮಗು, ಅಲೆಕ್ಸಾ ಎಂದರೆ ಸಾಕು ತಿರುಗಿ ನೋಡುತ್ತದೆ. ಮಗುವಿನ ನಿಜವಾದ ಹೆಸರು ಎಮಿಲಿ. ಆದರೆ, ಮನೆಯವರೆಲ್ಲ ಎಮಿಲಿಗಿಂತ ಅಲೆಕ್ಸಾ ಹೆಸರೇ ಹೆಚ್ಚು ಬಳಸುವುದರಿಂದ ಅದನ್ನೇ ತನ್ನ ಹೆಸರೆಂದು ತಿಳಿದು ಸ್ಪಂದಿಸಿ, ಪ್ರತಿಕ್ರಿಯಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಕೆಲವರು ಖುಷಿಪಟ್ಟಿದ್ದರೆ, ಇನ್ನು ಕೆಲವರು ಸಲಹೆಗಳನ್ನು ಕೊಟ್ಟಿದ್ದಾರೆ.
ವಿಡಿಯೋ ನೋಡುತ್ತಿದ್ದ ನಮ್ಮನೆ ಮಕ್ಕಳೂ ಅಲೆಕ್ಸಾ ಎಂದರೆ ಮಾತ್ರ ತಿರುಗಿ ನೋಡುತ್ತಿವೆ ಎಂದು ಒಬ್ಬರು ಕಮೆಂಟ್ ಹಾಕಿದ್ದರೆ, ಮಗುವಿನ ಹೆಸರನ್ನು ಅಲೆಕ್ಸಾ ಎಂದು ಬದಲಿಸುವುದೇ ಒಳಿತು. ಮಗುವೇನಾದರೂ ಕಳೆದು ಹೋದರೆ, ನೀವು ಎಮಿಲಿ ಹೆಸರಲ್ಲಿ ಹುಡುಕಾಟ ನಡೆಸುತ್ತೀರಿ, ಅಲೆಕ್ಸಾ ತನ್ನ ಹೆಸರು ಎಂದು ಮಗು ಭಾವಿಸಿದ್ದರೆ ಹುಡುಕಾಟ ಕಷ್ಟವಾದೀತು. ನಮ್ಮನೆಯಲ್ಲೇ ಇಂತಹ ಘಟನೆ ನಡೆದಿದೆ ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಈ ವಿಡಿಯೋ ಎಷ್ಟು ಮುದ್ದಾಗಿದೆ ಎನ್ನಿಸುತ್ತದೆಯೋ ಅಷ್ಟೇ ಪಾಠ ಇದರಲ್ಲಿ ಅಡಗಿದಂತಿದೆ.