ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಾಣು, ಅನೇಕ ಸಕಾರಾತ್ಮಕ ಬದಲಾವಣೆಗಳನ್ನೂ ಮನುಷ್ಯನ ಜೀವನ ಶೈಲಿಯಲ್ಲಿ ರೂಪಿಸಿದೆ. ಅದರಲ್ಲೂ ಹಲವರಲ್ಲಿ ಧೂಮಪಾನ ತ್ಯಜಿಸುವಂತೆ ಮಾಡಿದೆ. ಅನಾರೋಗ್ಯವೊಂದು ಆರೋಗ್ಯಕರ ಬೆಳವಣಿಗೆಗೆ ಕಾರಣವಾಗಿದೆ.
ಯುನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ಇತ್ತೀಚೆಗೆ ಅಧ್ಯಯನವೊಂದನ್ನು ನಡೆಸಿದ್ದು, ಕಳೆದ ಒಂದು ವರ್ಷದಲ್ಲಿ ಸಿಗರೇಟ್ ತ್ಯಜಿಸಿದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದನ್ನು ಈ ಅಧ್ಯಯನ ವರದಿ ಸಾರಿ ಹೇಳುತ್ತಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಿಗರೇಟ್ ಸಿಗದೆಯೇ ತ್ಯಜಿಸಿದವರು ಒಂದೆಡೆಯಾದರೆ, ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಕೊಂಡು ಸೇದಲಾರದೆ ಬಿಟ್ಟವರೂ ಇದ್ದಾರೆ. ಅಲ್ಲದೆ, ತಿಂಗಳುಗಟ್ಟಲೇ ಸಿಗರೇಟ್ ಸಿಗದೇ ಇದ್ದವರು ಅನ್ ಲಾಕ್ ಸಂದರ್ಭದಲ್ಲಿ ಸಿಗರೇಟ್ ಸಿಕ್ಕರೂ ಸೇದಬೇಕೆನಿಸದೆ ಅದನ್ನು ಮುಟ್ಟುತ್ತಿಲ್ಲ.
ಧೂಮಪಾನ ನಿಷೇಧಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸುವುದು, ಜಾಗೃತಿ ಮೂಡಿಸುವುದು ಹೀಗೆ ಅನೇಕ ರೀತಿಯಿಂದ ಸಿಗರೇಟ್ ವರ್ಜನೆಗೆ ಎಷ್ಟು ಪ್ರಯತ್ನಿಸಿದ್ದರೂ ಫಲ ಕೊಟ್ಟಿದ್ದು ಅಷ್ಟಕ್ಕಷ್ಟೆ. ಒಟ್ಟಿನಲ್ಲಿ ಯಾವ ಜಾಗೃತಿ ಅಭಿಯಾನಗಳೂ ಮಾಡದಿರುವ ಕಾರ್ಯವನ್ನು ಕೊರೊನಾ ವೈರಾಣು ಮಾಡಿದೆ. 2019 ರಲ್ಲಿ ಸಿಗರೇಟ್ ಬಿಟ್ಟವರ ಸಂಖ್ಯೆಯು ಶೇ.14.2 ಇದ್ದರೆ, 2020 ರಲ್ಲಿ ಶೇ.23.2 ರಷ್ಟಾಗಿದೆ. ಅಂದರೆ, 10 ವರ್ಷದಲ್ಲಿ ಆಗಬಹುದಾದ ಕೆಲಸವು ಒಂದೇ ವರ್ಷದಲ್ಲಿ ಆಗಿದೆ. ಇದಕ್ಕಾಗಿ ಕೊರೊನಾಕ್ಕೊಂದು ಧನ್ಯವಾದ ಹೇಳಲೇಬೇಕು. ಆಕ್ಷನ್ ಆನ್ ಸ್ಮೋಕಿಂಗ್ ಅಂಡ್ ಹೆಲ್ತ್ (ಆ್ಯಶ್) ಪ್ರಕಾರ ಇಂಗ್ಲೆಂಡಿನಲ್ಲಿ 1 ದಶಲಕ್ಷ ಮಂದಿ ಸಿಗರೇಟ್ ಚಟ ಬಿಟ್ಟಿದ್ದಾರೆ.