ವರ್ಷಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ನೀವೊಂದು ಫೋಟೋ ತೆಗೆದುಕೊಂಡಿರ್ತೀರಿ. ಆ ಫೋಟೋದಲ್ಲಿ ಅನೇಕ ಅಪರಿಚಿತ ಮುಖ ಇರುತ್ತವೆ. ಆ ಫೋಟೋದಲ್ಲಿ ಇರುವ ವ್ಯಕ್ತಿ ಯಾರೆಂದು ಹುಡುಕಬೇಕು ಅಂದರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಪೊಲೀಸ್ ಇಲಾಖೆ ಸಹಾಯ ಸಿಕ್ಕರೆ ಏನಾದರೂ ಸಾಹಸ ಮಾಡಬಹುದು.
ಆದರೆ ನ್ಯೂಯಾರ್ಕ್ ನಗರದ ಜನನಿಬಿಡ ಪ್ರದೇಶದಲ್ಲಿ ತೆಗೆದಿದ್ದ ಫೋಟೋದಲ್ಲಿ ಸೆರೆಯಾಗಿದ್ದ ಅಪರಿಚಿತ ವ್ಯಕ್ತಿಯನ್ನ ಪತ್ತೆ ಮಾಡುವಲ್ಲಿ ಟಿಕ್ ಟಾಕರ್ ಒಬ್ಬರು ಯಶಸ್ವಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದ ಉಪಯೋಗ ಪಡೆದುಕೊಂಡು ಟಿಕ್ಟಾಕರ್ ಈ ಸವಾಲಿನ ಕೆಲಸವನ್ನ ಪೂರ್ತಿಗೊಳಿಸಿದ್ದಾರೆ.
ಬೆಟ್ಸಿ ಜಾಸ್ಟರ್ ಟಿಕ್ಟಾಕ್ನಲ್ಲಿ ತನ್ನ ಹಳೆಯ ಫೋಟೋಗಳನ್ನ ವಿಡಿಯೋ ರೂಪದಲ್ಲಿ ಪೋಸ್ಟ್ ಮಾಡಿ ಈ ಅಪರಿಚಿತನಿಗಾಗಿ ಹುಡುಕಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ನಿಮಗೆ ಈತ ಯಾರೆಂದು ಗೊತ್ತಿದ್ದರೆ ನನಗೆ ಹೇಳಿ ಎಂದೂ ಮನವಿ ಮಾಡಿದ್ದರು.
ಇದಾದ ಬಳಿಕ ಆ ಅಪರಿಚಿತ ವ್ಯಕ್ತಿಯೇ ಸ್ವತಃ ಕಾಮೆಂಟ್ ಮಾಡಿ ಅದು ನಾನೇ ಎಂದು ಹೇಳಿದ್ದಾರೆ. ಆದರೆ ಬೆಟ್ಸಿ ನೀವಿದನ್ನ ಸಾಬೀತುಪಡಿಸಿ ಅಂತಾ ಸವಾಲು ಹಾಕಿದ್ದಾರೆ. ಆ ಬಳಿಕ ಇಬ್ಬರೂ ಪರಸ್ಪರ ಸಂಪರ್ಕಿಸಿದ್ದು, ಇದೀಗ ನೆಟ್ಟಿಗರು ನೀವಿಬ್ಬರೂ ಮದುವೆಯಾಗಬಾರದೇಕೆ ಎಂದು ಪ್ರಶ್ನಿಸುತ್ತಿದ್ದಾರೆ.