ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಲು ರೆಡಿಯಾಗಲು ಮಹಿಳೆಯರಿಗೆ ಗಂಟೆಗಟ್ಟಲೇ ಟೈಂ ಬೇಕು ಎನ್ನುವುದು ಗಂಡಸರ ಸಾಮಾನ್ಯ ದೂರು. ಮೇಕಪ್ ಮಾಡಿಕೊಳ್ಳಲು ಕುಳಿತರೆ ಅವರನ್ನು ಎಬ್ಬಿಸುವುದು ಭಾರೀ ಕಷ್ಟ ಎಂಬುದು ಹಳೆಯ ಮಾತು.
ಇಲ್ಲೊಬ್ಬ ಮಹಿಳೆ ಕಳೆದ 22 ವರ್ಷಗಳಿಂದ ದಾಂಪತ್ಯದಲ್ಲಿದ್ದು, ಅವರು ಪ್ರತಿನಿತ್ಯವೂ ಸ್ನಾನ ಮಾಡುತ್ತಲೇ ಒಂದು ಗಂಟೆಯ ಮಟ್ಟಿಗೆ ಮೇಕಪ್ ಹಾಗೂ ಕೇಶವಿನ್ಯಾಸ ಮಾಡುತ್ತಲೇ ಬಂದಿದ್ದಾರಂತೆ. ಯಾಕೋ ಇತ್ತೀಚೆಗೆ ಈ ಕೆಲಸದ ಮೇಲೆ ಬೋರ್ ಆಗಿರುವ ಕಾರಣ ಆಕೆ ಮೇಕಪ್ ಮಾಡಿಕೊಳ್ಳುವುದನ್ನೇ ಬಿಟ್ಟಿದ್ದಾರೆ.
ತನ್ನ ಅನುಭವವನ್ನು ಬ್ಲಾಗ್ ಒಂದರಲ್ಲಿ ಬರೆದುಕೊಂಡಿರುವ ಈಕೆ, “ನನಗೆ ರೋಸಿ ಹೋಗಿದ್ದು, ಇತ್ತೀಚೆಗೆ ಭಾನುವಾರಗಳಲ್ಲಿ ಮೇಕಪ್ ಮಾಡಿಕೊಳ್ಳುವನ್ನು ಬಿಟ್ಟುಬಿಟ್ಟಿದ್ದೆ. ನಾನು ಸಿಕ್ಕಾಪಟ್ಟೆ ಮೇಕಪ್ ಮಾಡಿಕೊಳ್ಳುವುದಿಲ್ಲ. ಬರೀ ಮಾಯಿಶ್ಚರೈಸರ್ ಹಚ್ಚಿ, ತಲೆಗೂದಲು ಕಟ್ಟಿಕೊಂಡು, ಟ್ರ‍್ಯಾಕ್ ಸೂಟ್ ಅಥವಾ ಇನ್ಯಾವುದೋ ಬಟ್ಟೆಗಳನ್ನು ಧರಿಸುತ್ತೇನೆ. ಈಗಲೂ ಸಹ ನಾನು ಪ್ರತಿನಿತ್ಯ ನೋಡುವ ಅನೇಕ ಮಹಿಳೆಯರಿಗಿಂತ ಚೆನ್ನಾಗೇ ಕಾಣುತ್ತೇನೆ ಎಂದು ನನಗೆ ಅನಿಸುತ್ತದೆ. ಆದರೆ ನನ್ನ ಪತಿಗೆ ಈ ಗ್ರೂಮಿಂಗ್-ಫ್ರೀ ಭಾನುವಾರಗಳು ಯಾಕೋ ಇಷ್ಟವಾಗುತ್ತಿಲ್ಲ” ಎಂದಿದ್ದಾರೆ.
ಈ ವಿಷಯ ಕೇಳಿ ಆಕೆಯ ಪತಿಗೆ ಅದೆಷ್ಟು ಖುಷಿ ಆಗಿರಬಹುದು ಎಂದು ನೀವು ಊಹಿಸುತ್ತಿರಬಹುದು ಅಲ್ಲವೇ? ಆದರೆ ಆತನ ಪ್ರತಿಕ್ರಿಯೆ ನಿಮ್ಮ ಊಹೆಗೆ ವಿರುದ್ಧವಾಗಿದೆ. ಹೀಗೆ ಮೇಕಪ್ ಮಾಡಿಕೊಳ್ಳುವುದನ್ನು ನಿಧಾನವಾಗಿ ಬಿಡುತ್ತಾ ಹೋದಲ್ಲಿ ತನ್ನ ಮಡದಿ ಚೆನ್ನಾಗಿ ಕಾಣುವುದಿಲ್ಲವೆಂಬುದು ಆಕೆ ಪತಿಯ ಅಂಬೋಣ.