ತಲೆನೋವು ಬಂದು ಮಾತೇ ನಿಂತು ಹೋಗಿದ್ದ ಯುವತಿ, ಇದೀಗ ಮೂರ್ನಾಲ್ಕು ಶೈಲಿಯ ಭಾಷೆಗಳನ್ನು ಮಾತನಾಡಲು ಶುರು ಮಾಡಿದ್ದಾಳೆ.
ವೈದ್ಯಲೋಕಕ್ಕೂ ಇದೊಂದು ಅಚ್ಚರಿ ಮತ್ತು ನಿಗೂಢಾತ್ಮಕ ಪ್ರಕರಣ ಎನಿಸಿದ್ದು, ಮೆದುಳಿಗೆ ಪೆಟ್ಟು ಬಿದ್ದದ್ದೇನೋ ನಿಜ. ಆದರೆ, ತಿಂಗಳುಗಟ್ಟಲೇ ಮಾತು ನಿಂತು ಹೋಗಿದ್ದೇಕೆ ? ಇದೀಗ ಏಕಾಏಕಿ ನಾಲ್ಕೈದು ಶೈಲಿಯ ಭಾಷೆಗಳನ್ನಾಡುತ್ತಿರುವುದು ಹೇಗೆ ಎಂಬ ಅಚ್ಚರಿ ಮೂಡಿಸಿದೆ.
ಮಕ್ಕಳ ಮನೆ ನಡೆಸುತ್ತಿದ್ದ ಈಶಾನ್ಯ ಇಂಗ್ಲೆಂಡಿನ ಎಮಿಲಿ ಈಗನ್, ಕೆಲ ವಾರಗಳ ಹಿಂದೆ ತಲೆನೋವು ಅನುಭವಿಸಿದ್ದು, ದಿನೇ ದಿನೇ ಧ್ವನಿಯೂ ಕ್ಷೀಣಿಸಿದೆ. ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಮಾಡಿಸಿ, ಚಿಕಿತ್ಸೆ ಪಡೆದ ಬಳಿಕ ಸಂಪೂರ್ಣ ಮಾತು ನಿಂತು ಹೋಗಿದೆ.
ತನ್ನ ಸಂಗಾತಿಯೊಂದಿಗೆ ಥೈಲ್ಯಾಂಡ್ ಗೆ ಪ್ರವಾಸ ಹೋಗಿದ್ದು, ಐದು ದಿನದ ಬಳಿಕ ತೊದಲಲು ಆರಂಭಿಸಿದ್ದಾಳೆ. ಐರೋಪ್ಯ ಶೈಲಿಯಲ್ಲಿ ಭಾಷೆಯಲ್ಲಿ ಮಾತನಾಡಲು ಶುರು ಮಾಡಿದ್ದಾಳೆ. ಇದರಿಂದ ಪ್ರಿಯಕರನಿಗೂ ಅಚ್ಚರಿಯಾಗಿದ್ದು, ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಶೈಲಿ ಯಾವುದಾದರೇನು ಮಾತು ಬರುತ್ತಿದೆಯಲ್ಲ ಎಂದು ಎಲ್ಲರೂ ಸುಮ್ಮನಾಗಿದ್ದಾರೆ.
ದಿನದಿಂದ ದಿನಕ್ಕೆ ಬೇರೆ ಬೇರೆ ಶೈಲಿಯ ಭಾಷೆ ಹೊರಬರಲಾರಂಭಿಸಿದ್ದು, ಮಾರುಕಟ್ಟೆಯಲ್ಲಿ ಖರೀದಿಗೆ ಹೋದಾಕೆಯನ್ನು ವಿದೇಶಿಗಳೆಂದು ಭಾವಿಸಿ ರಂಪಾಟ ನಡೆದಿದೆ. ನಿಮ್ಮಿಂದಲೇ ಕೊರೋನಾ ಹರಡುತ್ತಿರುವುದು, ನೀವೆಲ್ಲ ಏಕೆ ಹೀಗೆ ಸುತ್ತಾಡುತ್ತೀರಿ ಎಂದೆಲ್ಲಾ ಬೈಗುಳಗಳನ್ನೂ ತಿನ್ನಬೇಕಾಯಿತು.
ಕೊನೆಗೆ ವೈದ್ಯರಲ್ಲಿ ಪರೀಕ್ಷೆ ನಡೆಸಿದಾಗ ಇದು ಒಂದು ರೀತಿಯ ವಿದೇಶಿ ಭಾಷಾಶೈಲಿಯ ಮೇಲಿನ ವ್ಯಾಮೋಹದಿಂದ ಉಂಟಾಗಿರುವ ಅಸ್ವಸ್ಥತೆ. ಈ ವ್ಯಾಮೋಹ ಹೆಚ್ಚಾಗಬಾರದಷ್ಟೆ. ಉಳಿದಂತೆ ಮೂರ್ನಾಲ್ಕು ಶೈಲಿಯ ಭಾಷೆ ಮಾತನಾಡುವುದನ್ನ ಕಲಿತದ್ದು ಚಮತ್ಕಾರವೇ ಸರಿ ಎಂದಿದ್ದಾರೆ. ಒಟ್ಟಾರೆ ಎಮಿಲಿ ಈಗ ಈಶಾನ್ಯ ಇಂಗ್ಲೆಂಡ್ ಶೈಲಿಯ ಬದಲು, ಹರಕಲು ಮುರಕಲು ಇಂಗ್ಲಿಷ್, ಫ್ರೆಂಚ್ ಮತ್ತು ಇಟಾಲಿಯನ್ ಶೈಲಿಯ ಭಾಷೆಗಳನ್ನಾಡುತ್ತಿದ್ದಾಳೆ.