ಅಮೆರಿಕದ ಫ್ಯಾಶನ್ ಡಿಸೈನರ್ ಸಿಮೋನೆ ವಿಲಿಯಮ್ಸ್ ಮಹಿಳಾ ವಿಭಾಗದಲ್ಲಿ ಅತಿ ದೊಡ್ಡ ಆಫ್ರೋ ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ನ್ಯೂಯಾರ್ಕ್ನ ಬ್ರೂಕ್ಲಿನ್ ನಿವಾಸಿ ಸಿಮೋನೆ 20.5 ಸೆಂಟಿ ಮೀಟರ್ ಎತ್ತರ, 22.5 ಸೆಂಟಿಮೀಟರ್ ಅಗಲ ಹಾಗೂ 1.48 ಮೀ ಸುತ್ತಳತೆಯ ಆಫ್ರೋ ಹೊಂದಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಸಿಮೋನೆ, ಈ ಹಿಂದೆ ವಿಶ್ವ ದಾಖಲೆ ನಿರ್ಮಿಸಿದ್ದ ಐವಿನ್ ಡುಗಾನ್ ಹೆಸರು 8 ವರ್ಷಗಳ ಕಾಲ ವಿಶ್ವ ದಾಖಲೆಯ ಪುಟಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಾನು ಒಂದು ದಿನ ಈ ದಾಖಲೆಯಲ್ಲಿ ಮುರಿಯುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಸಿಮೋನೆಯ ಈ ನೈಸರ್ಗಿಕ ಕೂದಲನ್ನ ಬೆಳೆಸೋಕೆ ಶುರು ಮಾಡಿ 9ವರ್ಷಗಳು ಕಳೆದಿದೆ. ಈ ಹಿಂದೆ ಅವರು ತಮ್ಮ ಗುಂಗುರ ಕೂದಲನ್ನ ನೇರ ಮಾಡಿಸಿಕೊಂಡಿದ್ದರಂತೆ. ಆದರೆ ತಮ್ಮ 23ನೇ ವಯಸ್ಸಿಗೆ ಕೂದಲಲ್ಲಿ ಯಾವುದೇ ಮಾರ್ಪಾಡು ಮಾಡದೇ ನೈಸರ್ಗಿಕವಾಗೇ ಬೆಳೆಸುವ ನಿರ್ಧಾರಕ್ಕೆ ಬಂದಿದ್ದರು.
ಸಿಮೋನ್ ಪ್ರಕಾರ ಈ ಕೂದಲನ್ನ ಆರೈಕೆ ಮಾಡೋಕೆ ಸಾಕಷ್ಟು ತಾಳ್ಮೆಯ ಅಗತ್ಯವಿದೆಯಂತೆ. ಅವರು ಸಾಮಾನ್ಯವಾಗಿ ಕಡಿಮೆ ಸಲ್ಫೇಟ್ ಹೊಂದಿರುವ ಶಾಂಪೂ ಹಾಗೂ ಕೂದಲನ್ನ ನಯವಾಗಿಸಲು ಕಂಡಿಷನರ್ ಬಳಕೆ ಮಾಡುತ್ತಾರಂತೆ. ತಲೆ ಸ್ನಾನ ಮಾಡುವಾಗ ಕೂದಲನ್ನ ನಾಲ್ಕು ಭಾಗ ಮಾಡಿ ತೊಳೆಯುತ್ತಾರಂತೆ.