ಕೋವಿಡ್-19ನಿಂದ ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಇತರೆ ರೋಗಗಳು ಹಾಗೂ ಅರೆಕಾಲಿಕ ನಿಧನದ ಸಾಧ್ಯತೆಗಳು ಎಷ್ಟರ ಮಟ್ಟಿಗೆ ಇವೆ ಎಂಬುದನ್ನು ಅಂದಾಜಿಸಲ್ಲ ಸರಳವಾದ ರಕ್ತ ಪರೀಕ್ಷೆಯೊಂದನ್ನು ಭಾರತೀಯ ಮೂಲದವರೊಬ್ಬರನ್ನು ಒಳಗೊಂಡ ಸಂಶೋಧಕರ ತಂಡವೊಂದು ಅಭಿವೃದ್ಧಿಪಡಿಸಿದೆ.
ಜಿಸಿಐ ಇನ್‌ಸೈಟ್ ಹೆಸರಿನ ವೈದ್ಯಕೀಯ ವೃತ್ತಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ವರದಿಯಲ್ಲಿ — ಮೈಟೋಕಾಂಡ್ರಿಯಲ್ ಡಿಎನ್‌ಎ ಪ್ರಮಾಣವನ್ನು ಅಳೆಯುವ ಮೂಲಕ ಈ ರಕ್ತ ಪರೀಕ್ಷೆಯು ಮೇಲ್ಕಂಡ ಮಾಹಿತಿಗಳನ್ನು ತಿಳಿಯಲು ನೆರವಾಗಲಿದೆ ಎನ್ನಲಾಗಿದೆ. ಜೀವಕೋಶಗಳು ಶಕ್ತಿ ಉತ್ಪಾದಿಸುವ ಕೇಂದ್ರವಾದ ಮೈಟೋಕಾಂಡ್ರಿಯಾದ ವಿಶಿಷ್ಟ ಡಿಎನ್‌ಎ ಕಣ ಇದಾಗಿದೆ.
ಜೀವಕೋಶಗಳಿಂದ ಮೈಟೋಕಾಂಡ್ರಿಯಲ್ ಡಿಎನ್‌ಎ ರಕ್ತಕಣಗಳ ಒಳಗೆ ಚೆಲ್ಲಿಕೊಳ್ಳುವ ಕಾರಣದಿಂದ ದೇಹದಲ್ಲಿ ನಿರ್ದಿಷ್ಟ ರೀತಿಯ ಜೀವಕೋಶವೊಂದರ ಸಾವು ಸಂಭವಿಸುತ್ತಿದೆ. ಈ ಬೆಳವಣಿಗೆ ಆರಂಭಗೊಂಡ 24 ಗಂಟೆಗಳ ಒಳಗೆ ಪತ್ತೆ ಮಾಡಿದಲ್ಲಿ ಅಂಥ ಸೋಂಕಿತರ ಶುಶ್ರೂಷೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಲು ನೆರವಾಗಲಿದೆ ಎನ್ನುತ್ತಾರೆ ವಾಷಿಂಗ್ಟನ್ ವಿವಿಯ ಸಹಾಯಕ ಪ್ರಾಧ್ಯಾಪಕ ಹೃಷಿಕೇಶ್ ಕುಲಕರ್ಣಿ.
ಅದಾಗಲೇ 97 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾದ ಮೊದಲ ದಿನವೇ ಅವರ ದೇಹಗಳ ಮೈಟೋಕಾಂಡ್ರಿಯಲ್ ಡಿಎನ್‌ಎ ಮಟ್ಟವನ್ನು ಪರೀಕ್ಷೆ ಮಾಡಲಾಗಿದೆ. ಈ ಮೂಲಕ ಸೋಂಕಿನ ತೀವ್ರತೆಯನ್ನು ಮೊದಲೇ ಅಂದಾಜಿಸಿ, ಅದಕ್ಕೆ ತಕ್ಕಂತೆ ಶುಶ್ರೂಷೆ ಮಾಡಲು ಈ ಪರೀಕ್ಷೆ ನೆರವಾಗಲಿದೆ ಎನ್ನಲಾಗುತ್ತಿದೆ.