ತಮ್ಮ ಒಳ್ಳೆಯ ನಡೆಗಳ ಮೂಲಕ ಹೃದಯ ಗೆಲ್ಲುವ ಕಾಯಕಕ್ಕೆ ಮುಂದಾಗುವ ಸಾಕಷ್ಟು ಸಹೃದಯಿಗಳನ್ನು ಕಂಡಿದ್ದೇವೆ. ಅದರಲ್ಲಿ ಕೆಲವರು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಒಳಿತು ಮಾಡುವ ಸದಾಚಾರಿಗಳೂ ಇರುತ್ತಾರೆ.
ಜೋಶುವಾ ಹೆಸರಿನ ವ್ಯಕ್ತಿಯೊಬ್ಬರು ಫಾಸ್ಟ್-ಫುಡ್ ರೆಸ್ಟೋರೆಂಟ್ ಆದ ಮ್ಯಾಕ್ ಡೊನಾಲ್ಡ್ಸ್‌ಗೆ ಭೇಟಿ ನೀಡಿದ್ದ ವೇಳೆ, ತಾವು ಆರ್ಡರ್ ಮಾಡಿದ ಆಹಾರಕ್ಕೆ ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಪಾವತಿ ಮಾಡಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಎನ್ಯಾ ಹೆಸರಿನ ಮ್ಯಾಕ್ ಡೊನಾಲ್ಡ್ಸ್ ಎಂಪ್ಲಾಯಿ ಒಬ್ಬರು ತಮ್ಮ ಗ್ರಾಹಕರು ಖರೀದಿ ಮಾಡಿದ ಆಹಾರಕ್ಕೆ ತಮ್ಮ ಕಾರ್ಡ್‌ನಿಂದ ಪಾವತಿ ಮಾಡಿದ್ದಾರೆ.
ಬ್ರಿಟನ್‌ನ ಟೈಲ್ ಹಿಲ್‌ನಲ್ಲಿರುವ ಮ್ಯಾಕ್‌ಡೊನಾಲ್ಡ್ಸ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಎನ್ಯಾ ಹೆಸರಿನ ಈ ಸಹೃದಯಿ ಪ್ರತಿ ಗಂಟೆಗೆ £7.25 (Rs 680) ಸಂಪಾದಿಸುತ್ತಿದ್ದು, ತಿಂಗಳಿಗೆ £50ಗಳನ್ನು (Rs 4,696) ತಮ್ಮ ಗ್ರಾಹಕರಿಗೆ ಗುಡ್‌ವಿಲ್ ತೋರಿ ಬಿಲ್ ಪಾವತಿ ಮಾಡಲೆಂದೇ ವ್ಯಯಿಸುತ್ತಿದ್ದಾರೆ.
“ನಾನೆಷ್ಟು ಬಾರಿ ಹೀಗೆ ಮಾಡಿದ್ದೇನೆ ಎಂದು ನಿಮಗೆ ಹೇಳುವುದಿಲ್ಲ. ಪುಂಡ ಗ್ರಾಹಕರಿಗೆ ನಾನು ಈ ರೀತಿ ಮಾಡುವುದಿಲ್ಲ, ಯಾರು ನನ್ನೊಂದಿಗೆ ವ್ಯವಧಾನದಿಂದ ವರ್ತಿಸುತ್ತಾರೋ ಅವರಿಗೆ ಮಾತ್ರ. ’ತೆಗೆದುಕೊಳ್ಳುವ ಮಂದಿಗಿಂತ ಕೊಡುವ ಮಂದಿ ಚೆನ್ನಾಗಿ ನಿದ್ರೆ ಮಾಡಬಲ್ಲರು’ ಎಂಬುದು ನನ್ನ ತತ್ವ. ನಾನು ಇದನ್ನು ಹೆಸರಿಗಾಗಿ ಮಾಡುತ್ತಿಲ್ಲ. ಜನರಿಗೆ ಒಳಿತು ಮಾಡುವುದು ಚೆನ್ನ ಎಂದು ನನಗೆ ಅನಿಸುತ್ತದೆ. ಯಾರ ಜೀವನದಲ್ಲಿ ಏನಾಗುತ್ತಿದೆಯೋ ಎಂದು ನಿಮಗೆ ಗೊತ್ತಿಲ್ಲದೇ ಇರಬಹುದು, ಸಹೃದಯದ ವರ್ತನೆಯಿಂದ ಅವರಿಗೆ ಎಷ್ಟು ಖುಷಿಯಾಗಬಹುದು ಎಂದು ನಿಮಗೆ ಗೊತ್ತಿಲ್ಲ” ಎನ್ನುತ್ತಾರೆ ಎನ್ಯಾ.