ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವಾಸಿಸುವುದನ್ನು ಊಹೆ ಮಾಡಿಕೊಂಡಿದ್ದೀರಾ…? ಕಿವಿಗಡಚಿಕ್ಕುವ ವಿಮಾನಗಳ ಆ ಅಬ್ಬರದ ನಡುವೆ ಬದುಕು ನಡೆಸುವುದು ಬಲೇ ಕಿರಿಕಿರಿ.
ಜಪಾನ್‌ನ ನಾರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಾಕಾವೋ ಶಿಟಾ ಹೆಸರಿನ ರೈತರೊಬ್ಬರು ವಾಸ ಮಾಡುತ್ತಿದ್ದಾರೆ. ಜಪಾನಿನ ಎರಡನೇ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣ ಇದಾಗಿದೆ. ಇವರ ಹೊಲವು ನಾರಿತಾ ವಿಮಾನ ನಿಲ್ದಾಣದಿಂದ ಸುತ್ತುವರೆದಿದೆ.
1960ರ ದಶಕದಲ್ಲಿ ಈ ವಿಮಾನ ನಿಲ್ದಾಣದ ನಿರ್ಮಾಣ ಆರಂಭಗೊಂಡ ವೇಳೆ, ಸ್ಥಳೀಯ ರೈತರು ಸಾನ್ಝಿರುಕಾ ಅಭಿಯಾನಕ್ಕೆ ಮುಂದಾಗಿದ್ದರು. ರೈತರು ತಮ್ಮ ಭೂಮಿಯನ್ನು ಬಿಟ್ಟುಕೊಟ್ಟಲ್ಲಿ ಅದಕ್ಕೆ ಬದಲಿಯಾಗಿ ಆರ್ಥಿಕ ನೆರವು ನೀಡುವುದಾಗಿ ವಿಮಾನ ನಿಲ್ದಾಣದ ಆಡಳಿತ ಘೋಷಿಸಿತ್ತು. ಶಿಟೋರ ಗ್ರಾಮದಲ್ಲಿ 28 ಮನೆಗಳಿದ್ದವು. ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿ 66 ಮನೆಗಳಿದ್ದವು. ಕಾಲಕ್ರಮೇಣ ಎಲ್ಲರೂ ತಂತಮ್ಮ ಮನೆಗಳನ್ನು ಬಿಟ್ಟು ಹೋದರು. ಆದರೆ ಶಿಟೋ ತಂದೆ ಆ ಜಾಗದಿಂದ ಕದಲದೇ ಇದ್ದ ಕಾರಣ ವಿಮಾನ ನಿಲ್ದಾಣವು ತನ್ನ ರನ್‌ವೇಯ ಸ್ವರೂಪದಲ್ಲೇ ಮಾರ್ಪಾಡು ಮಾಡಿಕೊಳ್ಳಬೇಕಾಗಿ ಬಂತು.
“ನನಗೆ 48 ವರ್ಷ ವಯಸ್ಸು ಆಗಿದ್ದಾಗ ನನ್ನ ತಂದೆ ತೀರಿಕೊಂಡರು. ನನ್ನ ಕುಟುಂಬ ಕಳೆದ 100 ವರ್ಷಗಳಿಂದ ಇಲ್ಲಿಯೇ ನೆಲೆಸಿದೆ. ನಾನು ನನ್ನ ಹೊಲವನ್ನು ಬಿಟ್ಟುಕೊಟ್ಟಲ್ಲಿ 12.75 ಕೋಟಿ ರೂ.ಗಳನ್ನು ಕೊಡಲಾಗುವುದು ಎಂದು ಆಫರ್ ಕೊಡಲಾಗಿತ್ತು. ಇದು ರೈತನಿಗೆ ಸಿಗುವ 150 ವರ್ಷಗಳ ಮಟ್ಟದ ವೇತನವಾಗಿತ್ತು,” ಎಂದು ಶಿಟೋ ವಿವರಿಸುತ್ತಾರೆ. ಕೊರೊನಾ ವೈರಸ್ ಇರುವ ಕಾರಣದಿಂದ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶದ ಗಾಳಿ ಶುದ್ಧವಾಗಿದ್ದು, ಸಾಕಷ್ಟು ನಿಶ್ಯಬ್ಧತೆ ಇದೆ ಎನ್ನುತ್ತಾರೆ ಶಿಟೋ.