ಇದು ಜಗತ್ತಿನ ಅತಿ ಸುಂದರ ಮತ್ತು ಐಷಾರಾಮಿ ಕೋಣೆ. ಸಮುದ್ರ ಮಟ್ಟದಿಂದ ಬರೋಬ್ಬರಿ 6463 ಅಡಿ ಎತ್ತರದ ಬೆಟ್ಟದ ಮೇಲಿದೆ.
ಆದರೆ, ಇದಕ್ಕೆ ಗೋಡೆಗಳ ದಿಗ್ಬಂಧವಿಲ್ಲ. ಬಟಾಬಯಲೇ ಅಲ್ಲಿ ಎಲ್ಲ. ಎತ್ತ ತಿರುಗಿ ನೋಡಿರತ್ತ ಸುತ್ತಲೂ ಪರ್ವತಶ್ರೇಣಿ, ನದಿ, ಹಸಿರು, ಆಹ್ಲಾದಕರ ವಾತಾವರಣ….. ಪ್ರಕೃತಿಯೊಂದಿಗೆ ಏಕಾಂತ ಬಯಸುವವರಿಗೆ ಇದಕ್ಕಿಂತ ಇನ್ನೇನು ಬೇಕು ?
ಹೌದು, ಸ್ವಿಟ್ಜರ್ಲೆಂಡ್ ನಲ್ಲಿನ ಬೆಟ್ಟ-ಗುಡ್ಡಗಳನ್ನ ಹೃನ್ಮನ ತುಂಬಿಕೊಳ್ಳಲು ಹೊಸ ಮಾದರಿಯ ಪ್ರವಾಸೋದ್ಯಮ ಉತ್ತೇಜಿಸಲು ಚಾರ್ ಬೋನಿಯರ್ ಎಂಬ ಉದ್ಯಮಿ ಈ ಐಡಿಯಾ ಮಾಡಿದ್ದಾರೆ.
ಹೋಟೆಲ್ ಉದ್ಯಮದಲ್ಲಿ ಪಳಗಿರುವ ಈತ, ನ್ಯುಕ್ಲಿಯರ್ ಬಂಕರ್ ಪರಿಕಲ್ಪನೆಯಲ್ಲಿ ಹೋಟೆಲ್ ರೂಮ್ ಗಳನ್ನ ಮಾಡಿ, ಒಂದು ರಾತ್ರಿಗೆ 20 ಸ್ವಿಸ್ ಫ್ರಾಂಕ್ (1600 ರೂ.) ದರ ನಿಗದಿಪಡಿಸಿದ್ದರು. ಇದಕ್ಕೆ ಭಾರೀ ಜನಸ್ಪಂದನೆ ದೊರೆತಿತ್ತು. ಇನ್ನೂ ಹೆಚ್ಚಿನ ಹಣ ನೀಡಲು ತಯಾರಿದ್ದರು.
ಜನರ ಅಕ್ಕರಾಸ್ಥೆಗಳನ್ನೇ ಬಂಡವಾಳ ಮಾಡಿಕೊಂಡ ಈತ, ಬೆಟ್ಟದ ಮೇಲೆ ಹೋಟೆಲ್ ಉದ್ಯಮ ಆರಂಭಿಸಿದ. ಹಾಸಿಗೆ, ದಿಂಬು, ಹೊದಿಕೆ ಸೇರಿದಂತೆ ಐಷಾರಾಮಿ ಹೋಟೆಲ್ ನ ಕೋಣೆಯಲ್ಲಿರುವ ಬಹುತೇಕ ಸೌಲಭ್ಯಗಳನ್ನ ಅಲ್ಲಿ ಒದಗಿಸಿದ್ದಾನೆ. ಆದರೆ, ಹಾಸಿಗೆ ಮಾತ್ರ ಬೆಟ್ಟದ ಬಯಲಿನಲ್ಲೇ ಇದ್ದು, ಮಲಗಿದರೆ, ಕಣ್ಣೆದುರದಲ್ಲೇ ಪರ್ವತಶ್ರೇಣಿ, ಹಸಿರು, ಹೊಳೆ, ನೀಲಾಕಾಶ ಎಲ್ಲವೂ ಕಾಣುತ್ತದೆ.
ಒಂದು ರಾತ್ರಿಗೆ 251 ಸ್ವಿಸ್ ಫ್ರಾಂಕ್ (20,000 ರೂ.) ದರ ನಿಗದಿಯಾಗಿದ್ದು, ಪರ್ವತದ ಆಯ್ದ 7 ಕಡೆಗಳಲ್ಲಿ ಹಾಸಿಗೆ ವ್ಯವಸ್ಥೆ ಇರಲಿದೆ. ಸ್ಥಳೀಯರನ್ನೇ ಅಡುಗೆ ಸೇರಿದಂತೆ ಎಲ್ಲ ವಿಧವಾದ ಕೆಲಸಗಳಿಗೆ ತೆಗೆದುಕೊಂಡಿದ್ದು, ಉತ್ತಮ ಊಟೋಪಹಾರದ ವ್ಯವಸ್ಥೆಯೂ ಉಂಟು. ಇದಕ್ಕಿಂತ ಇನ್ನೇನು ಬೇಕು ? ಬ್ಯಾಗು ಹಿಡಿ ಸ್ವಿಟ್ಜರ್ಲೆಂಡ್ ಕಡೆ ನಡಿ.