
ರೋಮ್: ಇಟಲಿಯ ಜಿಸುಪ್ಪೆ ಪೆಟೆರ್ನೊ ತಮ್ಮ ಜೀವನದಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿದ್ದಾರೆ.
ಬಾಲ್ಯದಲ್ಲಿ ಶಾಲೆಯ ಪರೀಕ್ಷೆಗಳು, ಇತ್ತೀಚೆಗೆ ಕೊರೊನಾ ಮಹಾಮಾರಿ ಪರೀಕ್ಷೆ ಹಾಗೂ ಈಗ ವಿಶ್ವ ವಿದ್ಯಾಲಯದ ಅತಿ ಹಿರಿಯ ವಿದ್ಯಾರ್ಥಿಯಾಗಿ ಪದವಿ ಪರೀಕ್ಷೆ ಎದುರಿಸುತ್ತಿದ್ದಾರೆ.
ನೌಕಾ ಸೇನೆಯ ಹಾಗೂ ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿರುವ ಅವರು, ಡಿಪ್ಲೊಮಾ ಸರ್ಟಿಫಿಕೇಟ್ ಪಡೆಯುವ ಬದಲು ಪದವಿ ವ್ಯಾಸಂಗಕ್ಕೆ ಮುಂದಡಿ ಇಟ್ಟಿದ್ದಾರೆ. ಈ ಮೂಲಕ ಅವರಿಗಿಂತ ಕನಿಷ್ಠ 70 ವರ್ಷ ಕಿರಿಯರಾದ ಕುಟುಂಬದವರು, ಶಿಕ್ಷಕರಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪಲೆರೊನ್ ಪಟೆರೋನ್ ವಿಶ್ವ ವಿದ್ಯಾಲಯದಲ್ಲಿ ಇತಿಹಾಸ ಹಾಗೂ ಮನಃ ಶಾಸ್ತ್ರ ಪದವಿ ತರಗತಿಗಳಿಗೆ ಹೆಸರು ನೋಂದಾಯಿಸುವಾಗಲೇ ಅವರಿಗೆ 90 ವರ್ಷವಾಗಿತ್ತು.
“ನಾನು ಪುಸ್ತಕಗಳನ್ನು ತುಂಬಾ ಇಷ್ಟಪಡುತ್ತಿದ್ದೆ. ಆದರೆ ಯಾವಾಗಲೂ ಓದಲು ಸಾಧ್ಯವಾಗಿರಲಿಲ್ಲ. ಇದರಿಂದ ಈಗಲ್ಲದೆ ಮತ್ಯಾವಾಗಲೂ ಓದಲು ಸಾಧ್ಯವಿಲ್ಲ ಎಂದು 2017 ರಲ್ಲಿ ನಾನು ನಿರ್ಧರಿಸಿ ಪದವಿಗೆ ಸೇರಿಕೊಂಡೆ. ನಾನು ಯಾರನ್ನೂ ಮೀರಿಸಲು ಓದುತ್ತಿಲ್ಲ. ನಾನು ಸಾಮಾನ್ಯ ಮನುಷ್ಯ” ಎಂದು ಹಿರಿಯಜ್ಜ ಉತ್ತರಿಸುತ್ತಾರೆ.
ಅತಿ ಬಡತನದ ಕುಟುಂಬದಿಂದ ಬಂದಿದ್ದ ಅವರು ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಜೀವನಕ್ಕಾಗಿ ನೌಕಾಸೇನೆ ಸೇರಿದ್ದರು. ಎರಡನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ನಿವೃತ್ತಿಯ ನಂತರ ರೈಲ್ವೆ ಇಲಾಖೆ ಸೇರಿದ್ದರು. ಉದ್ಯೋಗ, ಕುಟುಂಬ, ಎರಡು ಮಕ್ಕಳ ಪಾಲನೆಯ ನಡುವೆ ಓದಿಗೆ ಬಿಡುವೇ ಸಿಕ್ಕಿರಲಿಲ್ಲ.