ಸಾವಿರಾರು ಮಂದಿಯ ಪಾಲಿಗೆ ಹೀರೋ ಆಗಲು ಲೆಕ್ಕವಿಲ್ಲದಷ್ಟು ದಾರಿಗಳಿವೆ. ಯಾವಾಗಲೂ ದೊಡ್ಡ ಕೆಲಸಗಳಿಂದಲೇ ಜನರ ಮನ ಗೆಲ್ಲಬೇಕು ಎಂದೇನಿಲ್ಲ.
ಬ್ರಿಟನ್‌ನ ಸಾಮರ್ಸೆಟ್‌ನ ಜಾನ್ ಹೊವರ್ಥ್ ಹೆಸರಿನ 74 ವರ್ಷದ ಈ ವ್ಯಕ್ತಿ ತಮ್ಮ ಸಣ್ಣದೊಂದು ಕೈಂಕರ್ಯದಿಂದಲೇ ಕಳೆದ 13 ವರ್ಷಗಳಿಂದಲೂ ತಮ್ಮ ಏರಿಯಾದಲ್ಲಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮ್ಮ ಕಮ್ಯೂನಿಟಿಯಲ್ಲಿರುವ ಹಿರಿಯ ಪ್ರಜೆಗಳು ಹಾಗೂ ಅನಾರೋಗ್ಯ ಪೀಡಿತರ ಸಾಕು ನಾಯಿಗಳನ್ನು ಅವರ ಬದಲಿಗೆ ವಾಕಿಂಗ್‌ಗೆ ಕರೆದುಕೊಂಡು ಹೋಗುವ ಕೆಲಸವನ್ನು ಕಳೆದ 13 ವರ್ಷಗಳಿಂದ ಮಾಡುತ್ತಿದ್ದಾರೆ ಹೋವರ್ಥ್.
22 ವರ್ಷಗಳ ಕಾಲ ನೌಕಾಸೇನೆಯಲ್ಲಿ ಸೇವೆ ಮಾಡಿ ನಿವೃತ್ತರಾಗಿರುವ ಹೋವರ್ಥ್, ನಾಯಿಗಳು ಬಹಳ ಒಳ್ಳೆಯ ಮಿತ್ರರಾಗಿರುವ ಕಾರಣ ಅವುಗಳೆಂದರೆ ತಮಗೆ ಭಾರೀ ಇಷ್ಟವೆಂದು ಹೇಳಿದ್ದಾರೆ. ಹಿರಿಯ ಜನರು, ಅಶಕ್ತರು ಹಾಗೂ ಅನಾರೋಗ್ಯ ಪೀಡಿತರಿಗಾಗಿ ಇರುವ ದಿ ಸಿನ್ನಮನ್ ಟ್ರಸ್ಟ್ ಹೋವರ್ಥ್‌ರ ಈ ಸೇವೆಯನ್ನು ಗುರುತಿಸಿ, ಅವರಿಗೆ ಸುದೀರ್ಘಾವಧಿಯ ಸೇವೆಯ ಸನ್ಮಾನ ಕೊಟ್ಟು ಗೌರವಿಸಿದೆ.