ಶಿಕ್ಷಣದಲ್ಲಿ ಪದವಿ, ಉನ್ನತ ಪದವಿ ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಪಠ್ಯದೊಂದಿಗೆ ಕಲೆಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆಯುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿಶ್ವದಲ್ಲಿ ಮೊದಲ ಬಾರಿ ನಿಂಜಾ ಆರ್ಟ್ ನಲ್ಲಿ ಪದವಿ ಪಡೆದಿದ್ದಾರೆ.
ಹೌದು, ಜಪಾನಿನ 45 ವರ್ಷದ ಗೆನಿಚಿ ಮಿತ್ಸುಹಾಶಿ ಎನ್ನುವವರು ನಿಂಜಾದ ಫೈಟ್, ಬೇಹುಗಾರಿಕೆ, ರಹಸ್ಯ ದಾಳಿಯ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ವಿಶ್ವದಲ್ಲಿ ಈ ಕಲೆಯಲ್ಲಿ ಪದವಿ ಪಡೆದುಕೊಂಡಿರುವ ಮೊದಲ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
ಟೋಕಿಯೋದಿಂದ 350 ಕಿಮೀ ದೂರದಲ್ಲಿರುವ ಜಪಾನ್ ಮೀ ವಿಶ್ವವಿದ್ಯಾಲಯದಲ್ಲಿ ನಿಂಜಾ ಕಲೆಗೆ ಪದವಿಯನ್ನು ನೀಡಲಾಗಿದೆ. ಮೂರು ವರ್ಷದ ಹಿಂದೆ ಈ ವಿವಿಯಲ್ಲಿ ಅಂತಾರಾಷ್ಟ್ರೀಯ ನಿಂಜಾ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಯಿತು. ಆಗ ಮಿತ್ಸುಹಾಶಿ ದಾಖಲಾಗಿದ್ದರು. ಶತಮಾನದ ಇತಿಹಾಸವಿರುವ ನಿಂಜಾ ಕಲೆಯಲ್ಲಿನ ಆಸಕ್ತಿಯಿಂದಲೇ ಈ ಕೇಂದ್ರಕ್ಕೆ ದಾಖಲಾದೆ. ಗುಡ್ಡಗಾಡಿನಲ್ಲಿರುವ ನಾನು, ನನ್ನ ಗ್ರಾಮದಲ್ಲಿ ನನಗೆ ಇಷ್ಟ ಬಂದ ರೀತಿಯಲ್ಲಿ ನಿಂಜಾ ಅಭ್ಯಾಸ ಮಾಡಿದ್ದೆ ಎಂದು ಮಿತ್ಸುಹಾಶಿ ಹೇಳಿದ್ದಾರೆ.