ಭಾರತದಿಂದ ಲಂಕೆಗೆ ಸೇತುವೆ ಕಟ್ಟುವ ಕಾಯಕಕ್ಕೆ ಅಳಿಲು ಕೂಡ ರಾಮಸೇವೆ ಮಾಡಿತ್ತಂತೆ. ಇದು ರಾಮಾಯಣ ಕಾಲದ ಕಥೆ.
ಆದರೆ, ಇಲ್ಲೊಂದು ಅಳಿಲು ಕುಡಿಯಲು ನೀರು ಸಿಗದೆ, ಬಹಳ ಬಾಯಾರಿಕೆಯಿಂದ ಬೇರೊಬ್ಬರ ಬಳಿ ತನ್ನ ಸೇವೆಗಾಗಿ ಕೈಚಾಚುತ್ತಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಅಳಿಲಿನ ಬೇಡಿಕೆ ಕಂಡು ಜನರು ನಿಬ್ಬೆರಗಾಗಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣಿಗಳಿಗೆ ಕುಡಿಯಲು ನೀರು ಸಿಗದಂತಹ ಸ್ಥಿತಿ ಬಂದಿದೆಯಲ್ಲ ಎಂದೂ ಮರುಗಿದ್ದಾರೆ.
ರಸ್ತೆಯಲ್ಲಿ ಬಾಟಲಿ ಹಿಡಿದು ನಿಂತಿದ್ದ ವ್ಯಕ್ತಿಯ ಬಳಿಗೆ ಪುಟುಪುಟು ಎಂದು ಹೆಜ್ಜೆ ಇಡುತ್ತಾ ಬರುವ ಅಳಿಲು, ಹಿಂದಿನ ತನ್ನ ಎರಡು ಕಾಲುಗಳ ಮೇಲೆ ನಿಂತು, ಮುಂದಿನ ಎರಡು ಕಾಲುಗಳನ್ನೇ ಕೈ ರೀತಿಯಲ್ಲಿ ಚಾಚುತ್ತದೆ.
ನನಗೂ ಸ್ವಲ್ಪ ನೀರು ಕೊಡಿ ಎನ್ನುವ ದಯನೀಯ ಭಾವದಲ್ಲಿ ಕೇಳಿದಂತಿದೆ. ಅದನ್ನು ನೋಡಿದ್ದ ವ್ಯಕ್ತಿ ಬಾಟಲಿಯನ್ನು ಇತ್ತ ತಿರುಗಿಸಿ ಹಿಡಿಯುತ್ತಾನೆ.
ಮತ್ತೆ ಕಾಲ ಮೇಲೆ ನಿಂತು ಕೈ ಮುಗಿಯುವ ಅಳಿಲು ಕುಡಿಯುವ ನೀರನ್ನು ಬೇಡುತ್ತದೆ. ಕೊನೆಗೆ ಆತ ಬಾಟಲಿಯನ್ನು ಅದರ ಬಾಯಿಗಿಟ್ಟರೆ, ಎರಡು ಕಾಲ ಮೇಲೆ ನಿಂತೇ ನೀರು ಕುಡಿದು ಓಡುತ್ತದೆ.