ಅಮೆರಿಕ ರಾಜಧಾನಿ ವಾಷಿಂಗ್ಟನ್ ಗಲಭೆ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವಾಗ್ದಂಡನೆಗೆ ಒಳಪಡಿಸುವ ನಿರ್ಣಯದ ಪರ ಮತ ಚಲಾಯಿಸುವುದಾಗಿ ಸ್ವಪಕ್ಷದ ಸದಸ್ಯೆ ಲಿಜ್ ಚೆನಿ ಘೋಷಿಸಿದ್ದಾರೆ.
“ಸಂವಿಧಾನದ ಮೇಲೆ ಪ್ರಮಾಣ ಮಾಡಿ ಪಟ್ಟಕ್ಕೆ ಏರಿದ ಅಮೆರಿಕದ ಯಾವುದೇ ಅಧ್ಯಕ್ಷರು ತಮ್ಮ ಅಧಿಕಾರವನ್ನು ಇಷ್ಟು ದುರ್ಬಳಕೆ ಮಾಡಿಕೊಂಡಿರಲಿಲ್ಲ. ನಮ್ಮ ಗಣತಂತ್ರದ ಅತ್ಯಂತ ಪವಿತ್ರ ಸ್ಥಳದಲ್ಲಿ ಸಾವು, ನೋವು ಹಾಗೂ ವಿಧ್ವಂಸಕ ಕೃತ್ಯಗಳು ಘಟಿಸಿವೆ” ಎಂದು ರಿಪಬ್ಲಿಕನ್ ಪಕ್ಷದ ಚೆನಿ ತಿಳಿಸಿದ್ದಾರೆ. ಈ ಮೂಲಕ ಖುದ್ದು ತಮ್ಮದೇ ಪಕ್ಷದ ಆಂತರಿಕ ವಿರೋಧದ ಅಲೆಯನ್ನು ಟ್ರಂಪ್ ಎದುರಿಸುತ್ತಿದ್ದಾರೆ ಎಂಬ ವರದಿಗಳು ಬಲ ಪಡೆಯುತ್ತಿವೆ.
ನ್ಯೂಯಾರ್ಕ್‌ನಿಂದ ಆಯ್ಕೆಯಾದ ರಿಪಬ್ಲಿಕನ್ ಪಕ್ಷದ ಜಾನ್ ಕಾಟ್ಕೋ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡನೆ ಮಾಡಿದ ರಿಪಬ್ಲಿಕನ್ ಪಕ್ಷದ ಮೊದಲ ಸದಸ್ಯರಾಗಿದ್ದಾರೆ. ಇವರೊಂದಿಗೆ ಇಲಿನಾಯ್ಸ್ ರಿಪಬ್ಲಿಕನ್ ಪ್ರತಿನಿಧಿ ಅಡಮ್ ಕಿಂಜಿಗರ್ ಸಹ ಅಧ್ಯಕ್ಷರ ಪದಚ್ಯುತಿಗೆ ಆಗ್ರಹಿಸುತ್ತಿದ್ದಾರೆ.
1974ರಲ್ಲಿ ಖುದ್ದು ತಮ್ಮದೇ ಪಕ್ಷದ ಅಭ್ಯರ್ಥಿಗಳಿಂದ ವಿರೋಧ ಎದುರಿಸಬೇಕಾಗಿ ಬಂದ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅಮೆರಿಕದ ಟಾಪ್ ಒನ್ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು.