ಐದು ವರ್ಷದ ಬಾಲಕ ನಡೆಸುತ್ತಿದ್ದ ಪುಟ್ಟ ಅಂಗಡಿಯನ್ನು ಕಳ್ಳರು ದೋಚಿದ ಬಳಿಕ ನೆಟ್ಟಿಗರು ಅಂಗಡಿಯನ್ನು ಮರು ಸ್ಥಾಪಿಸಲು ನೆರವಾದ ಪ್ರಸಂಗ ಇಂಗ್ಲೆಂಡ್ ನಲ್ಲಿ ನಡೆದಿದೆ.
ಐದು ವರ್ಷದ ಹ್ಯಾರಿ ಪ್ರತಿ ದಿನ ಶಾಲೆಗೆ ಹೋಗುವ ಮುನ್ನ ಮಾಲ್ವೆರ್ನಲ್ಲಿ ಹಾನೆಸ್ಟಿ ಶಾಪ್ ನಡೆಸುತ್ತಾನೆ. ತಮ್ಮ ಕುಟುಂಬದಿಂದ ತಯಾರಿಸಲ್ಪಡುವ ಮುಲಾಮು, ಆಡಿನ ಹಾಲು, ಸಾಬೂನುಗಳನ್ನು ರಸ್ತೆಯ ಪಕ್ಕದಲ್ಲಿಟ್ಟು ಪಕ್ಕದಲ್ಲಿ ಹಣ ಹಾಕಲು ಪೆಟ್ಟಿಗೆ ಇಟ್ಟಿರಲಾಗುತ್ತದೆ. ಸಾಮಗ್ರಿ ಅಗತ್ಯ ಇರುವವರು ಅದನ್ನು ತೆಗೆದುಕೊಂಡು ಹಣವನ್ನು ಪೆಟ್ಟಿಗೆಯಲ್ಲಿ ಹಾಕಿ ಹೋಗುತ್ತಾರೆ.
ಮಂಗಳವಾರ ಹ್ಯಾರಿ ಅಂಗಡಿಯನ್ನು ಪರೀಕ್ಷಿಸಲು ಹೋದಾಗ ಅವನ ಟೇಬಲ್ ಮತ್ತು ಅಂಗಡಿ ಚಿನ್ಹೆ ಮಾತ್ರ ಉಳಿದಿತ್ತು. ಅಲ್ಲಿದ್ದ ಸಾಮಗ್ರಿಗಳೆಲ್ಲ ಕಳುವಾಗಿತ್ತು. ಅದನ್ನು ನೋಡಿ ಬಾಲಕ ಕಣ್ಣೀರು ಹಾಕಿದ್ದ.
ಈ ಘಟನೆ ಬಗ್ಗೆ ಫಿಲಿಪ್ ಸೆವೆನ್ ಎಂಬುವರು ಟ್ವಿಟರ್ ನಲ್ಲಿ ಮರುಕ ಪಟ್ಟಿದ್ದರು. ಇದು ಹ್ಯಾರಿ, ಈತನಿಗೆ ಐದು ವರ್ಷ. ನನ್ನ ಸೇಲ್ ರೂಂ ಬಳಿ ಹಾನೆಸ್ಟಿ ಶಾಪ್ ನಡೆಸುತ್ತಿದ್ದಾನೆ. ಯಾರೋ ಅವನ ಹಣ ಮತ್ತು ಸ್ಟಾಕ್ ಕದ್ದಿದ್ದಾರೆ. ಕದ್ದವರಿಗೆ ನಾಚಿಕೆಯಾಗಬೇಕು ಎಂದು ಸಂದೇಶ ಪ್ರಕಟಿಸಿದ್ದರು. ಇದೀಗ ಹ್ಯಾರಿ ಅಂಗಡಿಗೆ ನೂರಾರು ಸಹಾಯದ ಕೊಡುಗೆಗಳು ಬಂದಿವೆಯಂತೆ. ಜೊತೆಗೆ ನೆಟ್ಟಿಗರು ಹ್ಯಾರಿಗೆ ಆತ್ಮವಿಶ್ವಾಸ ತುಂಬುವ ಮಾತನ್ನಾಡಿದ್ದಾರೆ.