ನಾವೆಲ್ ಕೊರೋನಾ ವೈರಸ್ ಕಾರಣದಿಂದಾಗಿ ಈಗ ಎಲ್ಲೆಡೆ ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಹೊಸ ಮಾನದಂಡಗಳು ಸ್ಥಾಪಿತವಾಗಿವೆ. ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್ ಗಳಲ್ಲಿ ಸಂಪರ್ಕರಹಿತವಾಗಿ ರೋಗಿಗಳನ್ನು ಅಟೆಂಡ್ ಮಾಡಲೆಂದು ರೋಬೊಟ್ ಗಳನ್ನು ಪರಿಚಯಿಸಿರುವ ಬಗ್ಗೆ ಓದಿದ್ದೇವೆ.
ಆದರೆ ಜಪಾನ್‌ನಲ್ಲಿ ರೋಬೊಟ್‌ಗಳನ್ನು ಬೇರೊಂದು ಕಾರಣಕ್ಕೆ ಹೆಚ್ಚಾಗಿ ಬಳಕೆ ಮಾಡಲು ಉತ್ತೇಜನ ಕೊಡಲಾಗುತ್ತಿದೆ. ಅಲ್ಲಿ ವಯಸ್ಸಾಗುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಕೆಲಸ ಮಾಡುವ ವಯಸ್ಸಿನವರ ಗಂಭೀರ ಕೊರತೆ ಕಾಣುತ್ತಿದೆ. ಈ ಕೊರತೆ ನೀಗಿಲು ರೋಬೊಟ್‌ಗಳನ್ನು ಪರಿಚಯಿಸಲಾಗಿದೆ.
ನೌಕರರ ಕೊರತೆಯನ್ನು ಮೆಟ್ಟಿ ನಿಲ್ಲಲೆಂದು ಜಪಾನ್‌ನ ಸ್ಟೋರ್‌ಗಳಲ್ಲಿ ರೋಬೊಟ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇವು ದಣಿವರಿಯದೇ ಗ್ರಾಹಕರ ಸೇವೆಯಲ್ಲಿ ನಿರತವಾಗಿವೆ. ಜಪಾನ್‌ನ ಎರಡನೇ ಅತಿ ದೊಡ್ಡ ಕನ್ವೀನಿಯೆನ್ಸ್ ಸ್ಟೋರ್ ಆಗಿರುವ ಫ್ಯಾಮಿಲಿ ಮಾರ್ಟ್, ತನ್ನಲ್ಲಿ ಬರುವ ಗ್ರಾಹಕರನ್ನು ಅಟೆಂಡ್ ಮಾಡಲೆಂದು ಟೆಲೆಕ್ಸಿಸ್ಟೆನ್ಸ್ ಸಂಸ್ಥೆಯಿಂದ Model-T ರೋಬೊಟ್ ಅನ್ನು ತಯಾರಿಸಿಕೊಂಡಿದೆ. ಏಳು ಅಡಿ ಉದ್ದ ಇರುವ ಈ ರೋಬೊಟ್‌ಗಳನ್ನು ರಿಮೋಟ್ ಕಂಟ್ರೋಲರ್ ಮೂಲಕ ವಿವಿಧ ರೀತಿಯ ಚಲನೆಗಳನ್ನು ಮಾಡುವಂತೆ ರಚಿಸಲಾಗಿದೆ.