
ಸಿಯೋಲ್: ದಕ್ಷಿಣ ಕೋರಿಯಾದ ರಾಜಧಾನಿ ಸಿಯೋಲ್ ನಲ್ಲಿ ಜಾದು ಹಾಗೂ ಅಕ್ರೊಬೈಟ್ ಪ್ರದರ್ಶನಗಳು ಕೊರೊನಾ ಲಾಕ್ಡೌನ್ ಬಳಿಕ ಮರು ಪ್ರಾರಂಭವಾಗಿವೆ. ತೆರೆದ ಮೈದಾನಗಳಲ್ಲಿ ವಾರಾಂತ್ಯದಲ್ಲಿ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರು ಕೊರೊನಾದಿಂದ ಸುರಕ್ಷಿತವಾಗಿರಲು ಕಾರಿನಲ್ಲಿ ಕುಳಿತು ಅದನ್ನು ವೀಕ್ಷಿಸುತ್ತಿದ್ದಾರೆ.
ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ವಾರ್ಷಿಕ ಸರ್ಕಸ್ ಪ್ರದರ್ಶನವನ್ನೂ ಎರಡು ಬಾರಿ ಮುಂದೂಡಲಾಗಿತ್ತು. ಈಗ ಅದನ್ನೂ ಪ್ರಾರಂಭಿಸಿ ಡ್ರೈವ್ ಇನ್ ಪ್ರದರ್ಶನವಾಗಿ ಮಾರ್ಪಡಿಸಲಾಗಿದೆ.”ಕೊರೊನಾ ವೈರಸ್ ಆತಂಕದಲ್ಲಿರುವ ಜನರನ್ನು ರಂಜಿಸಿ, ನಗಿಸಿ ಅವರ ಆರೋಗ್ಯ ವೃದ್ಧಿಸಲು ಕಲಾ ಪ್ರದರ್ಶನಗಳು ಅತಿ ಮುಖ್ಯವಾಗಿವೆ. ಇದರಿಂದ ನಾವು ಅತಿ ಸುರಕ್ಷಿತ ಡ್ರೈವ್ ಇನ್ ವಿಧಾನ ಅಳವಡಿಸಿಕೊಂಡಿದ್ದೇವೆ” ಎಂದು ಸಿಯೋಲ್ ಸ್ಟ್ರೀಟ್ ಆರ್ಟ್ ಕ್ರಿಯೇಶನ್ ಸೆಂಟರ್ ನ ಚೀ ಬೋಂಗ್ ಹೀ ತಿಳಿಸಿದ್ದಾರೆ.
“ಪ್ರತಿ ಪ್ರದರ್ಶನಕ್ಕೂ 30 ಕಾರುಗಳನ್ನು ಪಾರ್ಕ್ ಮಾಡಲು ಅವಕಾಶ ನೀಡಲಾಗುತ್ತದೆ. ಅಲ್ಲದೆ ಉಚಿತವಾಗಿ ಆನ್ ಲೈನ್ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಕೂಡ ಇರುತ್ತದೆ. ಕಾರಿನಿಂದಲೇ ವೀಕ್ಷಕರು ಚಪ್ಪಾಳೆ ತಟ್ಟಿ, ಹಾರ್ನ್ ಹಾಕಿ ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ” ಎಂದು ಅವರು ವಿವರಿಸಿದ್ದಾರೆ. ವೀಕ್ಷಕರ ಕೊರತೆ ಕರತಾಡನವಿಲ್ಲದೆ ಪ್ರದರ್ಶನ ನಮಗೆ ಒಂದು ಸವಾಲು ಎಂದು ಸರ್ಕಸ್ ನ ಕಲಾವಿದ ಲೀ ಸುಂಗ್ ಹ್ಯಾಂಗ್ ಹೇಳಿದ್ದಾರೆ.