ಮುಂಜಾನೆ ಸಮಯದಲ್ಲಿ ಹಕ್ಕಿಗಳ ಕಲರವ ಕೇಳೋದು ಅಂದ್ರೆ ತುಂಬಾನೇ ಹಿತ ಎನಿಸುತ್ತೆ. ಆದರೆ ವಿಶ್ವದಲ್ಲಿ ಎಷ್ಟು ಬಗೆಯ ಹಕ್ಕಿಗಳಿದೆ ಎಂದು ಪ್ರಶ್ನೆ ಕೇಳಿದ್ರೆ ಉತ್ತರ ನೀಡೋದು ಕಷ್ಟ ಎನಿಸಬಹುದು. ಹಕ್ಕಿಗಳ ಕುರಿತಾಗಿ ಇತ್ತೀಚಿಗೆ ನಡೆಸಿದ ಅಧ್ಯಯನವೊಂದರಲ್ಲಿ ವಿಶ್ವದಲ್ಲಿ ಸರಿ ಸುಮಾರು 50 ಬಿಲಿಯನ್ ಪಕ್ಷಿಗಳಿವೆ ಎಂದು ತಿಳಿದು ಬಂದಿದೆ. ಇದು ಜಗತ್ತಿನಲ್ಲಿರುವ ಮನುಷ್ಯರ ಜನಸಂಖ್ಯೆಗಿಂತ 6 ಪಟ್ಟು ಹೆಚ್ಚಾಗಿದೆ.
ವಿಶ್ವದಲ್ಲಿ ಒಟ್ಟು 7.8 ಬಿಲಿಯನ್ ಜನರು ವಾಸಿಸುತ್ತಿದ್ದಾರೆ. ಆದರೆ ಪಕ್ಷಿಗಳ ಸಂಖ್ಯೆ ಇದಕ್ಕಿಂತ 6 ಪಟ್ಟು ಹೆಚ್ಚು ಅಂದರೆ 50 ಬಿಲಿಯನ್ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಪ್ರಾಧ್ಯಾಪಕ ಕಾರ್ನವೆಲ್ ಹೇಳಿದ್ದಾರೆ. ಹಾರಾಟ ಮಾಡಲು ಸಾಧ್ಯವಾಗದ ಹಾಗೂ ಪೆಂಗ್ವಿನ್ಸ್ ಗಳನ್ನೂ ಸೇರಿಸಿ ಈ ಗಣತಿಯನ್ನ ಮಾಡಲಾಗಿದೆ. ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವ ವಿದ್ಯಾಲಯವು ಪಕ್ಷಿಗಳ ಗಣತಿಯನ್ನ ಮಾಡಿದೆ.
ಹೌಸ್ ಸ್ಪ್ಯಾರೋ (1.6 ಬಿಲಿಯನ್), ಯುರೋಪಿಯನ್ ಸ್ಟಾರ್ಲಿಂಗ್ (1.3 ಬಿಲಿಯನ್), ರಿಂಗ್ ಬಿಲ್ಡ್ (1.2 ಬಿಲಿಯನ್) ಹಾಗೂ ಬಾರ್ನ್ ಸ್ವಾಲೋ (1.1 ಬಿಲಿಯನ್) ಇವುಗಳು ಒಂದು ಬಿಲಿಯನ್ ಗಡಿ ದಾಟಿದ ಪಕ್ಷಿಗಳಾಗಿವೆ. ಚೈನೀಸ್ ಕ್ರೆಸ್ಟೆಡ್ ಟರ್ನ್, ಸ್ಕ್ರಬ್ ಬರ್ಡ್ ಹಾಗೂ ಇನ್ವಿಸಿಬಲ್ ರೈಲ್ನಂತಹ ಪಕ್ಷಿಗಳು 5000ಕ್ಕಿಂತ ಕಡಿಮೆ ಸಂಖ್ಯೆಯನ್ನ ಹೊಂದಿವೆ ಎಂದು ಅಧ್ಯಯನ ಹೇಳಿದೆ.