ಅಪರಿಚಿತ ಮುಖಗಳನ್ನ ಕಂಡ ನಾಯಿಗಳು, ಗುಂಪುಗೂಡಿ ಕೋರೆಹಲ್ಲು ತೋರಿ ಬೊಗಳಲು ಶುರು ಮಾಡಿದರೆ ಯಾರು ತಾನೆ ಹತ್ತಿರಕ್ಕೆ ಹೋಗಲು ಸಾಧ್ಯ ? ಆದರೆ ಈ ಸ್ಟೋರಿ ಭಿನ್ನವಾಗಿದೆ. ಬೀದಿ ನಾಯಿಗಳನ್ನು ಹುಡುಕಿ, ಅವುಗಳಿಗೆ ಕ್ಷೌರ ಮಾಡಿ ಅಂದ ಹೆಚ್ಚಿಸುವುದೇ ಈತನ ಪರಮ ಕಾಯಕ. ಹೌದು, ಇದು ಅಚ್ಚರಿ ಎನಿಸಿದರೂ ನಿಜ.
ಥೈಲ್ಯಾಂಡ್ ನಲ್ಲಿ ಪ್ರಾಣಿಪ್ರಿಯರ ಸಂಖ್ಯೆ ತುಸು ಜಾಸ್ತಿಯೇ. ಅದರಲ್ಲೂ ಕ್ರೈಂಗ್ ಕಾಯ್ ಎಂಬಾತ ಎಲ್ಲ ಬಿಟ್ಟು ಇದನ್ನೇ ಕಾಯಕ ಮಾಡಿಕೊಂಡಿದ್ದಾನೆ. ಲಾಕ್ ಡೌನ್ ಅವಧಿಯಲ್ಲಿ ತನ್ನ ಕಾಯಕ ಮಾಡಲು ಅವಕಾಶ ಸಿಗದಿದ್ದಕ್ಕೆ ಚಡಪಡಿಸಿದ್ದ ಈತ, ಅನ್ ಲಾಕ್ ಆದದ್ದೇ ತಡ ಬೀದಿ ನಾಯಿಗಳನ್ನು ಹುಡುಕಿಕೊಂಡು ಹೊರಟಿದ್ದಾನೆ.
ಅದರಲ್ಲೂ ಬಿರುಬೇಸಿಗೆಯ ಕಾಲದಲ್ಲಿ ಮೈತುಂಬಾ ಕೂದಲು ಬೆಳೆದರೆ, ಅವಕ್ಕೂ ಹಿಂಸೆ ಎನಿಸುತ್ತದೆ. ಇದನ್ನೆಲ್ಲ ಅರಿತು, ಕೂದಲು ಟ್ರಿಮ್ ಮಾಡಿದರೆ, ಹಗುರಾಗುತ್ತವೆ. ನೋಡಲೂ ಅಂದವಾಗಿರುತ್ತವೆ ಎಂಬುದು ಈತನ ಅಭಿಪ್ರಾಯ. ಲಾಕ್ ಡೌನ್ ನಂತರ ತನ್ನಿಷ್ಟದ ಕೆಲಸ ಮಾಡುತ್ತಿರುವ ಖುಷಿ ಈತನಿಗೆ ಇದೆ. ಕಳೆದ ವಾರ ಒಂದೇ ದಿನ 600 ನಾಯಿಗಳ ಪೈಕಿ 80 ನಾಯಿಗಳ ಕ್ಷೌರ ಮಾಡಿದ್ದಾನೆ. ಅಲ್ಲದೆ, ತನ್ನನ್ನು ಬ್ಲಾಕ್ ಶೀಪ್ ಆಫ್ ದ ಡಾಗ್ ಗ್ರೂಮಿಂಗ್ ಬಿಸಿನೆಸ್ ಎಂದೂ ಕರೆದುಕೊಂಡಿದ್ದಾನೆ.