
ಸಮುದ್ರದ ಬದಿಯಲ್ಲಿ ವಿಹಾರ ಮಾಡೋದು ಅಂದರೆ ಯಾರಿಗ್ ತಾನೇ ಇಷ್ಟವಿರೋದಿಲ್ಲ ಹೇಳಿ..? ಒತ್ತಡ ನಿವಾರಣೆ ಮಾಡೋಕೆ ಇದಕ್ಕಿಂತ ಒಳ್ಳೆ ಆಯ್ಕೆ ಇನ್ನೊಂದು ಇರಲಿಕ್ಕಿಲ್ಲ. ಆದರೆ ಈ ವಾಯುವಿಹಾರ ನಿಮ್ಮ ಬದುಕನ್ನೇ ಬದಲಾಯಿಸಲೂಬಹುದು. ಇಂತಹದ್ದೇ ಒಂದು ಅನುಭವಕ್ಕೆ ಸಾಕ್ಷಿಯಾಗಿದ್ದಾರೆ ಥೈಲ್ಯಾಂಡ್ನ ಮಹಿಳೆ.
49 ವರ್ಷದ ಮಹಿಳೆ ಫೆಬ್ರವರಿ 23ರಂದು ಸಮುದ್ರ ವಿಹಾರ ಮಾಡುತ್ತಿದ್ದ ವೇಳೆ ಮರಳು ರಾಶಿಯ ನಡುವೆ ವಿಚಿತ್ರ ವಸ್ತುವೊಂದನ್ನ ಕಂಡಿದ್ದಾರೆ. ಗಾಢವಾದ ಮೀನಿನ ವಾಸನೆ ಹೊಂದಿದ್ದ ಈ ವಸ್ತುವನ್ನ ಮಹಿಳೆ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ಆಶ್ಚರ್ಯಕರ ವಿಚಾರ ಅಂದರೆ ಈ ವಿಚಿತ್ರ ವಸ್ತು ತಿಮಿಂಗಲದ ವಾಂತಿ ಅಥವಾ ತಿಮಿಂಗಲದ ಕರಳಿನಿಂದ ಉತ್ಪತ್ತಿಯಾಗುವ ವಿಶೇಷ ಮೇಣ ಅಂಬೆಗ್ರಿಸ್ ಎಂದು ತಿಳಿದು ಬಂದಿದೆ. ಇದರ ಬೆಲೆ 1.8 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಈ ತಿಮಿಂಗಲದ ವಾಂತಿ 7 ಕೆಜಿ ಇದ್ದು 12 ಇಂಚು ಅಗಲ , 24 ಇಂಚು ಉದ್ದ ಇದೆ ಎನ್ನಲಾಗಿದೆ.
ಮನೆಗೆ ಈ ವಿಚಿತ್ರ ವಸ್ತುವನ್ನ ತೆಗೆದುಕೊಂಡ ಹೋದ ಬಳಿಕ ಮಹಿಳೆ ಪಕ್ಕದ ಮನೆಯವರ ಬಳಿ ಇದು ಯಾವ ವಸ್ತು ಆಗಿರಬಹುದು ಎಂದು ಕೇಳಿದ್ದಾರೆ. ಇದರ ಗಾಢ ವಾಸನೆಯನ್ನ ಕಂಡ ನೆರೆಹೊರೆಯವರು ಅಂಬೆಗ್ರಿಸ್ ಎಂದು ಅಂದಾಜಿಸಿದ್ದಾರೆ. ಮೇಣವನ್ನ ಬೆಂಕಿಗೆ ಹಿಡಿದ್ರೆ ಅದು ಕರಗುತ್ತೆ. ಆದರೆ ಅಂಬೆಗ್ರಿಸ್ ಮಾತ್ರ ಇನ್ನೂ ಗಟ್ಟಿಯಾಗುತ್ತದೆ. ಇದೇ ಪರೀಕ್ಷೆಯನ್ನ ಮಾಡಿ ನೋಡಿದ ಬಳಿಕ ತಿಮಿಂಗಲದ ವಾಂತಿ ಇದು ಅನ್ನೋದು ಕನ್ಪರ್ಮ್ ಆಗಿದೆ.
ಅಂಬೆಗ್ರಿಸ್ ಎಂಬುವುದು ತಿಮಿಂಗಲದ ಕರಳಿನಲ್ಲಿ ಉತ್ಪತ್ತಿಯಾಗುವ ಮೇಣದ ವಸ್ತುವಾಗಿದೆ. ಇದು ತಿಳಿ ಕಂದು ಇಲ್ಲವೇ ಕಪ್ಪು ಬಣ್ಣದಲ್ಲಿ ಇರುತ್ತದೆ. ಈ ಮೇಣವನ್ನ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಕೆ ಮಾಡ್ತಾರೆ.