ಬಹಳ ಕಡಿಮೆ ಬೆಲೆಗೆ ಸೀಫುಡ್ ಬಫೆಟ್ ಆಯೋಜಿಸುವುದಾಗಿ ತಂತಮ್ಮ ಗ್ರಾಹಕರಿಗೆ ವೋಚರ್ ಗಳನ್ನು ಮಾರಾಟ ಮಾಡಿ, ಮುಂಗಡವಾಗಿ ಹಣ ಕಟ್ಟಿಸಿಕೊಂಡು ಮೋಸ ಮಾಡಿದ ಆಪಾದನೆ ಮೇಲೆ ಎರಡು ರೆಸ್ಟೊರೆಂಟ್ ಮಾಲೀಕರಿಗೆ 723 ವರ್ಷಗಳ ಜೈಲು ಶಿಕ್ಷೆ ಘೋಷಿಸಿದ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ.
ಅಪಿಕಾರ್ಟ್ ಬೊವಾರ್ನ್‌ಬನ್‌ಚರಕ್ ಹಾಗೂ ಪ್ರಸ್ಪಸ್ಸಾರ್ನ್ ಬಾವೋರ್ನ್‌ಬಾನ್ ಎಂಬ ಇಬ್ಬರನ್ನು ಈ ಸಂಬಂಧ ಶಿಕ್ಷೆಗೆ ಒಳಪಡಿಸಲಾಗಿದೆ. ಕೇವಲ 88 ಥಾಯ್ ಬಾಹ್ಟ್ (215 ರೂ.ಗಳು) ವೆಚ್ಚದಲ್ಲಿ ದೊಡ್ಡ ಬಫೆ ಆಯೋಜಿಸುವುದಾಗಿ 20,000 ಗ್ರಾಹಕರಿಂದ ಒಟ್ಟಾರೆ 12.26 ಕೋಟಿ ರೂ.ಗಳನ್ನು ದುಡ್ಡನ್ನು ಇಬ್ಬರೂ ಪೀಕಿಸಿಕೊಂಡಿದ್ದರು.
ಮೊದಲು ವೋಚರ್ ಖರೀದಿ ಮಾಡಿದ್ದ ಗ್ರಾಹಕರಿಗೆ ಬಫೆಟ್ ಊಟ ಸಿಕ್ಕಿದೆ. ಆದರೆ ವಿಪರೀತ ವೇಟಿಂಗ್ ಲಿಸ್ಟ್ ಇದ್ದ ಕಾರಣ ಮಿಕ್ಕವರಿಗೆ ಊಟದ ವ್ಯವಸ್ಥೆ ಮಾಡುವುದು ಮಾಲೀಕರಿಗೆ ಸಾಧ್ಯವಾಗಿಲ್ಲ. ಬಳಿಕ ಸಾಕಷ್ಟು ಸೀಫುಡ್ ಸಿಗದ ಕಾರಣ ಬೇಡಿಕೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಇಬ್ಬರೂ ಕೈಚೆಲ್ಲಿದ್ದಾರೆ. ರೀಫಂಡ್ ಕೋರಿ ದೂರು ಸಲ್ಲಿಸಿದ್ದ 818 ಗ್ರಾಹಕರ ಪೈಕಿ 375 ಮಂದಿ ತಮ್ಮ ದುಡ್ಡನ್ನು ಮರಳಿ ಪಡೆದುಕೊಂಡಿದ್ದಾರೆ.
ಬಳಿಕ ಸಿಕ್ಕಾಪಟ್ಟೆ ದೂರುಗಳು ದಾಖಲಾದ ಕಾರಣ ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ, ಸುಳ್ಳು ಜಾಹೀರಾತಿನ ಮೂಲಕ ಜನರ ಹಾದಿ ತಪ್ಪಿಸಿದ ಆಪಾದನೆ ಮೇಲೆ ಇಬ್ಬರಿಗೂ ತಲಾ 723 ವರ್ಷಗಳ ಕಾಲ ಜೈಲುವಾಸದ ಶಿಕ್ಷೆ ವಿಧಿಸಿದೆ.