ನ್ಯೂಯಾರ್ಕ್: 16 ವರ್ಷದ ಬಾಲಕ ಹಿಮ ತುಂಬಿದ್ದ ನಾಲೆಗೆ ಜಿಗಿದು ಏಳು ತಿಂಗಳ ಮಗುವಿನ ರಕ್ಷಣೆ ಮಾಡಿದ ಘಟನೆ ಅಮೆರಿಕಾದ ಕೆಂಟ್ ನಲ್ಲಿ ನಡೆದಿದೆ.
ಜಾರ್ಜ್ ಹಿಬ್ಬರ್ಡ್ ಎಂಬ ಬಾಲಕ ಅ. 3 ರಂದು ನಾಲೆಯ ಪಕ್ಕದಲ್ಲಿ ತನ್ನ ಸ್ನೇಹಿತನ ಜತೆ ವಾಕಿಂಗ್ ಮಾಡುತ್ತಿದ್ದ. ಸಮೀಪದಲ್ಲೇ ಮಹಿಳೆಯೊಬ್ಬಳು ಒಂದು ಕೈಯ್ಯಲ್ಲಿ ಮಗುವಿದ್ದ ಗಾಡಿ ತಳ್ಳುತ್ತ ಇನ್ನೊಂದು ಕೈಯ್ಯಲ್ಲಿ ನಾಯಿಯನ್ನು ಸರಪಳಿ ಹಾಕಿ ಹಿಡಿದುಕೊಂಡು ಹೋಗುತ್ತಿದ್ದಳು.
ನಾಯಿ ಏನನ್ನೋ ನೋಡಿ ಸರಪಳಿ ಎಳೆದುಕೊಂಡು ಓಡಲು ಮುಂದಾಯಿತು. ಆಗ ಮಗುವಿದ್ದ ಗಾಡಿ ಮಹಿಳೆಯ ಕೈ ತಪ್ಪಿ ಉರುಳುತ್ತ ನಾಲೆಯ ಇಳಿಜಾರಿನಲ್ಲಿ ಸಾಗಲಾರಂಭಿಸಿತು. ತಾಯಿ ಸಹಾಯಕ್ಕಾಗಿ ಕೂಗಲಾರಂಭಿಸಿದ್ದಳು.
ಹಿಬ್ಬರ್ಡ್ ತಕ್ಷಣ ಸಮಯ ಪ್ರಜ್ಞೆಯಿಂದ ತನ್ನ ಬಟ್ಟೆ ತೆಗೆದು ಹಿಮ ತುಂಬಿದ ನಾಲೆಗೆ ಜಿಗಿದಿದ್ದ. ಇನ್ನೇನು ನೀರಿಗೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿ ಅಳುತಿದ್ದ ತಾಯಿಗೆ ಒಪ್ಪಿಸಿದ.”ಅಲ್ಲೊಂದು ಮರವಿತ್ತು. ಮಗು ಇದ್ದ ಗಾಡಿ ಅದಕ್ಕೆ ತಾಗಿ ನಿಲ್ಲುತ್ತದೆ ಎಂದುಕೊಂಡೆ ಆದರೆ, ನನ್ನ ಯೋಜನೆ ತಪ್ಪಾಯಿತು. ಗಾಡಿ ಉರುಳುತ್ತ ನೀರಿನಲ್ಲಿ ಬಂದು ತೇಲಲಾರಂಭಿಸಿತು. ಒಂದು ಕಾಲು ದಾರಿಗೆ ತಾಗಿ ನಿಂತಿತು” ಎಂದು ಬಾಲಕ ತನ್ನ ಅನುಭವ ಹಂಚಿಕೊಂಡಿದ್ದಾನೆ.
ಹಿಬ್ಬರ್ಡ್ ಹಾಗೂ ಆತನ ಸ್ನೇಹಿತ ಗಾಡಿಯನ್ನೂ ಮೇಲೆಳೆದು ಮಹಿಳೆಗೆ ಒಪ್ಪಿಸಿ ಆಕೆಗೆ ಒಂದು ಟ್ಯಾಕ್ಸಿ ಮಾಡಿಸಿ ಮನೆಗೆ ಕಳಿಸಿದ್ದಾನೆ.