ಕಾಬೂಲ್: ತಾಲಿಬಾನ್ ಭಯೋತ್ಪಾದಕರು ಮತ್ತು ಉತ್ತರ ಪಡೆ ಮೈತ್ರಿಯ ನಡುವೆ ಸಂಘರ್ಷ ಮುಂದುವರೆದಿದ್ದು 41 ತಾಲಿಬಾನ್ ಉಗ್ರರನ್ನು ಮೈತ್ರಿ ಪಡೆ ಹತ್ಯೆ ಮಾಡಿದೆ.
ಪಂಜ್ ಶೀರ್ ಪ್ರಾಂತ್ಯದ ಮೇಲೆ ದಾಳಿಗೆ ಯತ್ನ ನಡೆಸಿದ ಹಿನ್ನೆಲೆಯಲ್ಲಿ 41 ಉಗ್ರರನ್ನು ಹತ್ಯೆ ಮಾಡಿ 21 ಉಗ್ರರನ್ನು ಸೆರೆ ಹಿಡಿಯಲಾಗಿದೆ. ನಿಮಗೆ ಪಂಜ್ ಶೀರ್ ಪ್ರಾಂತ್ಯದ ಒಳಗೆ ಬರಲು ಬಿಡುತ್ತೇವೆ. ಆದರೆ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಉತ್ತರ ಮೈತ್ರಿ ಪಡೆಯ ಕಮಾಂಡರ್ ಹಸೀಬ್ ಹೇಳಿದ್ದಾರೆ.
ತಾಲಿಬಾನ್ ಸರ್ಕಾರ ರಚನೆ:
ಅಫ್ಘಾನಿಸ್ಥಾನದ ಪ್ರಸಕ್ತ ಸ್ಥಿತಿಗತಿ ಕುರಿತಾಗಿ ಕಂದಹಾರ್ ನಲ್ಲಿ ತಾಲಿಬಾನ್ ನಾಯಕರು ಮೂರು ದಿನಗಳ ಕಾಲ ಸಭೆ ನಡೆಸಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ, ರಾಜಕೀಯ, ಭದ್ರತೆ ಮತ್ತು ಸಾಮಾಜಿಕ ವಿಷಯಗಳ ಕುರಿತಾಗಿ ಮಾತುಕತೆ ನಡೆಸಲಾಗುವುದು ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ತಿಳಿಸಿದ್ದಾರೆ
ಸೇನೆ ಕಳಿಸಲ್ಲ ಎಂದ ಅಮೆರಿಕ:
ಆಫ್ಘಾನಿಸ್ತಾನಕ್ಕೆ ಮತ್ತೆ ಅಮೆರಿಕ ಸೇನೆಯನ್ನು ಕಳುಹಿಸುವುದಿಲ್ಲ. ಮತ್ತೆ ಸೇನೆಯನ್ನು ಕಳುಹಿಸುವ ಯೋಜನೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಇಲ್ಲವೆಂದು ಅವರ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ನಿರಾಶ್ರಿತರಿಗೆ ನೆಲೆ ಕಲ್ಪಿಸುವುದರ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.