
ನೀವು ಸಸ್ಯಾಹಾರಿಯೇ ಆಗಿರಿ, ಮಾಂಸಾಹಾರಿಯೇ ಆಗಿರಿ. ಈ ಸುದ್ದಿ ಓದಿದ ನಂತರ ಅಸಹ್ಯ ಮಾಡಿಕೊಳ್ಳುತ್ತೀರಿ. ಇದು ಜಗತ್ತಿನ ಅಸಹ್ಯಕರ ಆಹಾರ ಸಂಗ್ರಹಾಲಯದ ಕಥೆ. ಸ್ವೀಡನ್ ನಲ್ಲಿರುವ ಈ ಸಂಗ್ರಹಾಲಯದಲ್ಲಿ ಊಹೆಗೂ ನಿಲುಕದ ಅಸಹ್ಯಕರ ಆಹಾರ ಪ್ರದರ್ಶನ ನಡೆಯುತ್ತದೆ.
ಎತ್ತಿನ ಮರ್ಮಾಂಗ (ಶಿಶ್ನ, ವೃಷಣ), ಪೆರುವಿನ ಕಪ್ಪೆಗಳಿಂದ ತಯಾರಾದ ಸ್ಮೂಥಿ, ಚೀನಾ ಮತ್ತು ಕೊರಿಯಾ ಭಾಗದ ಇಲಿಮರಿಗಳಿಂದ ತಯಾರಾದ ವೈನ್…..ಹೀಗೆ ನಾನಾ ನಮೂನೆಯ ಅಸಹ್ಯ ಹುಟ್ಟಿಸುವ ಆಹಾರ ಪದಾರ್ಥಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ.
ಇದಿಷ್ಟೇ ಅಲ್ಲದೆ, ಜೋಳವನ್ನ ಅಗಿದು, ಜಗಿದು ಉಗಿದ ಪೆರುವಿನ ಚೀಚಾ ಪೇಯ, ಬಾಳೆಹಣ್ಣಿನಿಂದ ಸಿದ್ಧಪಡಿಸಿದ ಉಗಾಂಡಾ ಜಿನ್ ಸೇರಿದಂತೆ ಕೆಲ ದೇಶಗಳ ಮೂಲಿಕೆಗಳಿಂದ ತಯಾರಾದ ಆರೋಗ್ಯಕರ ಪಾನೀಯಗಳೂ ಇಲ್ಲಿ ಸಿಗುತ್ತವೆ.
ಪ್ರದರ್ಶನ ಆಯೋಜಿಸಿರುವ ಮ್ಯೂಸಿಯಂ ನಿರ್ದೇಶಕ ಆ್ಯಂಡ್ರೀಸ್ ಅಹ್ರೇನ್ಸ್, ವಿನೂತನ ಪರಿಕಲ್ಪನೆ ಇದು. ಆನೇಕರು ಇದನ್ನು ನೋಡಿಯೇ ವಾಂತಿ ಮಾಡಿಕೊಂಡಿದ್ದಾರೆ. ಕೆಲವರು ತಿಂದು-ಕುಡಿದು ಅರಗಿಸಿಕೊಂಡಿದ್ದಾರೆ. ಕೊನೆಯದಾಗಿ ವಾಂತಿ ಮಾಡಿಕೊಳ್ಳಲು ಇನ್ನೆರಡು ದಿನ ಮಾತ್ರ ಬಾಕಿ ಇದೆ ಎನ್ನುವ ಮೂಲಕ ಇನ್ನೂ ಎರಡು ದಿನ ಪ್ರದರ್ಶನ ನಡೆಯಲಿದೆ ಎಂಬ ಸುಳಿವು ನೀಡಿದ್ದಾರೆ.