ಮಕ್ಕಳ ಪಾಲನೆ ವಿಚಾರಕ್ಕೆ ಬಂದರೆ ತಾಯಿ ಯಾವುದೇ ಸವಾಲುಗಳನ್ನ ಎದುರಿಸಬಲ್ಲಳು. ಈ ಮಾತಿಗೆ ಸಾಕ್ಷಿ ಎಂಬಂತೆ ಕೇವಲ ಒಂದೇ ಕೈಯನ್ನ ಹೊಂದಿರುವ ತಾಯಿಯೊಬ್ಬಳು ಹೇಗೆ ತಾನು ಕಾಲಿನ ಸಹಾಯದಿಂದ ಮಗನ ಡೈಪರ್ ಬದಲಾಯಿಸುತ್ತೇನೆ ಅನ್ನೋದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅಮೆರಿಕದ ಸರ್ಫರ್ ಬೆಥಾನಿ ಹ್ಯಾಮಿಲ್ಟನ್ 2003ರಲ್ಲಿ 13 ವರ್ಷ ವಯಸ್ಸಿನವಳಾಗಿದ್ದಾಗ ಶಾರ್ಕ್ ದಾಳಿಯಲ್ಲಿ ತನ್ನ ಕೈ ಕಳೆದುಕೊಂಡಿದ್ದಳು. ಇದೀಗ ಮೂರು ಮಕ್ಕಳ ತಾಯಿಯಾಗಿರುವ ಈ ಮಹಿಳೆ ಒಂದೇ ಕೈನ ಸಹಾಯದಿಂದ ಮಕ್ಕಳ ಆರೈಕೆ ಮಾಡುತ್ತಾಳೆ.
ಹ್ಯಾಮಿಲ್ಟನ್ಗೆ ಈಗ 31 ವರ್ಷ. ಒಂದೇ ಕೈನಿಂದ ಮೂರು ಮಕ್ಕಳನ್ನ ಸಂಭಾಳಿಸೋದು ಸುಲಭದ ಕೆಲಸವಂತೂ ಅಲ್ಲ. ಆದರೆ ಹ್ಯಾಮಿಲ್ಟನ್ ಒಂದಿಲ್ಲೊಂದು ಕ್ರಿಯಾತ್ಮಕ ಯೋಜನೆಗಳ ಮೂಲಕ ಮಕ್ಕಳ ಪೋಷಣೆಯನ್ನ ಮಾಡುತ್ತಾರೆ.
ಒಂದೇ ಕೈಯನ್ನ ಹೊಂದಿರುವ ತಾಯಿಯ ಜೀವನದ ಸಣ್ಣ ತುಣುಕು ಇಲ್ಲಿದೆ. ನಾನು ನಮ್ಮ ಮೂರನೇ ಮಗುವನ್ನ ನೋಡಿಕೊಳ್ಳುತ್ತಿದ್ದೇನೆ. ಪ್ರತಿ ಬಾರಿ ಮಕ್ಕಳ ಪೋಷಣೆ ಮಾಡುವಾಗಲೂ ನಾನು ಹೊಸ ಐಡಿಯಾಗಳನ್ನ ಕಂಡುಕೊಳ್ಳುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ನಾನು ಪಾದದ ಸಹಾಯದಿಂದ ಮಗುವಿನ ಡೈಪರ್ ಬದಲಾಯಿಸುತ್ತೇನೆ. ಮಕ್ಕಳನ್ನ ನೋಡಿಕೊಳ್ಳಲು ನಾನು ದಿಂಬುಗಳನ್ನ ಹೆಚ್ಚೆಚ್ಚು ಬಳಕೆ ಮಾಡುತ್ತೇನೆ. ಕೆಲವೊಮ್ಮೆ ನನಗೆ ಒತ್ತಡ ಎನಿಸುತ್ತದೆ. ಆದರೂ ನಾನು ಇವೆಲ್ಲವನ್ನ ಮುಂದುವರಿಸುತ್ತೇನೆ. ಧನಾತ್ಮಕ ರೂಪದಲ್ಲೇ ಎಲ್ಲಾ ಕೆಲಸಗಳನ್ನ ಮಾಡುತ್ತೇನೆ. ಪ್ರತಿ ಬಾರಿ ಹೆರಿಗೆಯಾದ ಬಳಿಕ ಮಕ್ಕಳನ್ನ ನೋಡಿಕೊಳ್ಳುವ ವೇಳೆ ಹೊಸದೇನಾದರೂ ಕಲಿಯುತ್ತೇನೆ ಎಂದು ಹೇಳಿದ್ದಾರೆ.
ಮಹಿಳೆಯ ಈ ಛಲಕ್ಕೆ ನೆಟ್ಟಿಗರು ತಲೆಬಾಗಿದ್ದು, ʼಸೂಪರ್ ಅಮ್ಮʼ ನೀವು ಎಂದು ಹಾಡಿ ಹೊಗಳಿದ್ದಾರೆ.