ಹೆಚ್ಚುತ್ತಿರುವ ಕೊರೊನಾ ವೈರಸ್ ಮಧ್ಯೆ ಲಸಿಕೆ ಬಗ್ಗೆ ನೆಮ್ಮದಿ ಸುದ್ದಿ ಹೊರಬಿದ್ದಿದೆ. ಕೊರೊನಾ ವಿರುದ್ಧದ ಯುದ್ಧದಲ್ಲಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿ ಎಂದು ಬ್ರಿಟನ್‌ನಲ್ಲಿ ನಡೆಸಿದ ಅಧ್ಯಯನವೊಂದು ಹೇಳಿದೆ.
ಭಾರತದಲ್ಲಿ ಈ ಲಸಿಕೆಯನ್ನು ಕೋವಿಶೀಲ್ಡ್ ಹೆಸರಿನಲ್ಲಿ ಸಿದ್ಧಪಡಿಸಲಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇದನ್ನು ಉತ್ಪಾದಿಸುತ್ತಿದೆ. ಅಸ್ಟ್ರಾಜೆನೆಕಾ ಲಸಿಕೆ ಕೊರೊನಾದಿಂದ ಸಾಕಷ್ಟು ರಕ್ಷಣೆ ನೀಡುತ್ತದೆ ಎಂದು ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಹೇಳಿದೆ.
ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯ ಎರಡು ಡೋಸ್ ಕೊರೊನಾ ಕಾಯಿಲೆಯ ವಿರುದ್ಧ ಶೇಕಡಾ 85 ರಿಂದ ಶೇಕಡಾ 90ರಷ್ಟು ರಕ್ಷಣೆ ನೀಡುತ್ತದೆ. ಈ ಲಸಿಕೆ ತೆಗೆದುಕೊಂಡ ನಂತ್ರ ಮೇ 9 ರವರೆಗೆ 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ 13,000 ಮಂದಿ ಸಾವಿನ ದವಡೆಯಿಂದ ಹೊರ ಬಂದಿದ್ದಾರೆ. ಲಸಿಕೆ ನಂತರ, 65 ವರ್ಷ ಮೇಲ್ಪಟ್ಟ ಸುಮಾರು 40,000 ಜನರನ್ನು ಆಸ್ಪತ್ರೆಗೆ ಸೇರಿಸುವ ಅವಶ್ಯಕತೆ ಬರಲಿಲ್ಲವೆಂದು ಅಧ್ಯಯನ ಹೇಳಿದೆ.
ಲಸಿಕೆ ಜೀವಗಳನ್ನು ಉಳಿಸುತ್ತಿದೆ. ಸೋಂಕಿನ ನಂತರ ಆಸ್ಪತ್ರೆಗೆ ಹೋಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಹೊಸ ಅಂಕಿಅಂಶ ತೋರಿಸುತ್ತದೆ ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಹೇಳಿದ್ದಾರೆ. ಈ ಲಸಿಕೆಯನ್ನು ಯುಕೆ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರಿಗೆ ನೀಡಲಾಗಿದೆ.