ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಅನಿವಾರ್ಯ ಮಾಡಲಾಗಿದೆ. ಕೆಲ ದೇಶಗಳಲ್ಲಿ ಮಾಸ್ಕ್ ಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ಸಿಂಗಾಪುರದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ್ದು, ಬ್ರಿಟಿಷ್ ಪ್ರಜೆಗೆ ದುಬಾರಿಯಾಗಿ ಪರಿಣಮಿಸಿದೆ.
ವ್ಯಕ್ತಿ ಪದೇ ಪದೇ ಕೊರೊನಾ ಪ್ರೋಟೋಕಾಲ್ ಉಲ್ಲಂಘಿಸುತ್ತಿದ್ದ. ಬುಧವಾರ, ಆತನನ್ನು ಆರು ವಾರಗಳ ಕಾಲ ಜೈಲಿಗೆ ಕಳುಹಿಸುವಂತೆ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆಯೂ ಬ್ರಿಟಿಷ್ ಪ್ರಜೆಯೊಬ್ಬ, ಮಾಸ್ಕ್ ಧರಿಸಲು ನಿರಾಕರಿಸಿದ್ದಕ್ಕೆ ಜೈಲಿಗೆ ಕಳುಹಿಸಲಾಗಿತ್ತು.
ಬೆಂಜಮಿನ್ ಗ್ಲಿನ್ ಎಂಬ ವ್ಯಕ್ತಿ ನಾಲ್ಕು ಬಾರಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಮೇ ತಿಂಗಳಲ್ಲಿ ರೈಲಿನಲ್ಲಿ ಮತ್ತು ಜುಲೈನಲ್ಲಿ ನ್ಯಾಯಾಲಯದಲ್ಲಿ ಮುಖವಾಡಗಳನ್ನು ಧರಿಸಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸುವುದು ಮತ್ತು ಸರ್ಕಾರಿ ಉದ್ಯೋಗಿಗಳಿಗೆ ಬೆದರಿಕೆ ಹಾಕಿದ್ದರ ವಿರುದ್ಧ ದೂರು ದಾಖಲಾಗಿತ್ತು. ಈ ಹಿಂದೆ, ನ್ಯಾಯಾಲಯ, ಆತನ ಮಾನಸಿಕ ಪರೀಕ್ಷೆಗೆ ಆದೇಶಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ, ಬುಧವಾರದ ವಿಚಾರಣೆಯ ಸಮಯದಲ್ಲಿ, ಆರೋಪಿ, ದೇಶಕ್ಕೆ ವಾಪಸ್ ಕಳುಹಿಸುವಂತೆ ಕೋರಿದ್ದಾನೆ.
ಏಷ್ಯಾದ ಅತಿದೊಡ್ಡ ವ್ಯಾಪಾರ ಕೇಂದ್ರಗಳಲ್ಲಿ ಒಂದಾದ ಸಿಂಗಾಪುರದಲ್ಲಿ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಕೋವಿಡ್ -19 ರ ನಿಯಮಗಳನ್ನು ಮುರಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.