ರೋಮ್: ಒಬ್ಬರ ಕಿಡ್ನಿ ಅಥವಾ ಹೃದಯವನ್ನು ಇನ್ನೊಬ್ಬರಿಗೆ ಕಸಿ ಮಾಡಲು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸುವುದು ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲು. ಜೀರೋ ಟ್ರಾಫಿಕ್ ಮಾಡಿಕೊಂಡು ವೇಗವಾಗಿ ಆಂಬುಲೆನ್ಸ್ ಓಡಿಸಿದ ಎಷ್ಟೋ ಸುದ್ದಿ ಕೇಳಿದ್ದೇವೆ. ಇಟಲಿ ಪೊಲೀಸರು ಲಾಂಬೊರ್ಗಿನಿ ಕಾರ್ ಬಳಸಿ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ.
ವೇಗಕ್ಕೇ ಹೆಸರಾಗಿರುವ ಲಾಂಬೊರ್ಗಿನಿ ಹುರಾಕಾನ್ ಎಲ್‌ಪಿ-610-4 ಕಾರನ್ನು ಗಂಟೆಗೆ 230 ಕಿಮೀ ವೇಗದಲ್ಲಿ ಓಡಿಸಿ 6ತಾಸಿನ ದಾರಿಯನ್ನು 2 ತಾಸಿನಲ್ಲಿ ಕ್ರಮಿಸಿ, ಮೂತ್ರಪಿಂಡವನ್ನು ಸರಿಯಾದ ಸಮಯಕ್ಕೆ ಸಾಗಿಸಿ ಒಂದು ಜೀವ ಉಳಿಸಿದ ಘಟನೆ ಇಟಲಿಯಲ್ಲಿ ನಡೆದಿದೆ. ರ‍್ಯೂಟರ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಕಾರಿನಲ್ಲಿ ಮೂತ್ರಪಿಂಡವನ್ನು ಸಾಗಿಸುವ ವಿಡಿಯೋ ಅಪ್ ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ.
ಇಟಲಿಯ ಉತ್ತರ ಭಾಗದಲ್ಲಿರುವ ಪಾಡೊವಾ ಎಂಬ ಪುಟ್ಟ ನಗರದ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಂದ ತೆಗೆದ ಮೂತ್ರಪಿಂಡವನ್ನು ದೇಶದ ದಕ್ಷಿಣ ಭಾಗದಲ್ಲಿರುವ ರಾಜಧಾನಿ ನಗರ ರೋಮ್‌ನ ಆಸ್ಪತ್ರೆಗೆ ಸಾಗಿಸಬೇಕಿತ್ತು. ಸಾಮಾನ್ಯವಾಗಿ 6 ತಾಸಿನ ದಾರಿ ಇದಾಗಿದೆ. ಆದರೆ, ಇಟಲಿ ಪೊಲೀಸರ ಈ ಕಾರು ಬೆಳಗ್ಗೆ 10.30 ಕ್ಕೆ ಹೊರಟು ವಾಹನ ಸಂಚಾರವಿರುವ ರಸ್ತೆಯಲ್ಲಿ ಕ್ರಮಿಸಿ 12.30 ಕ್ಕೆಲ್ಲ ಗುರಿ ತಲುಪಿತ್ತು.
ಇಟಲಿ ಪೊಲೀಸರು ಇಂಥ ತುರ್ತು ವ್ಯವಸ್ಥೆಗಾಗಿಯೇ ಈ ಕಾರನ್ನು ಬಳಸುತ್ತಿದ್ದಾರೆ. ಈ ಕಾರಿನಲ್ಲಿ ಕಂಪ್ಯೂಟರ್ ವ್ಯವಸ್ಥೆ. ಅಂಗಾಂಗಗಳನ್ನು ಇಡಲು ಶೀತಲೀಕರಣ ವ್ಯವಸ್ಥೆಗಳೂ ಇವೆ.