ಟಿವಿಯಲ್ಲಿ ನೇರ ಪ್ರಸಾರವಾಗುತ್ತಿದ್ದ ಆನ್ಲೈನ್ ಸಂಭಾಷಣೆಯ ನಡುವೆಯೇ, ತಾವು ಸ್ನಾನ ಮಾಡುತ್ತಿದ್ದಾಗಿನ ದೃಶ್ಯಾವಳಿಯನ್ನು ಅಕಸ್ಮಾತ್ ಹರಿಯಬಿಟ್ಟ ಕಾರಣ ಸ್ಪೇನ್‌ನ ಕೌನ್ಸಿಲರ್ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಉತ್ತರ ಸ್ಪೇನ್‌ನ ಕಾಂಟಾಬ್ರಿಯಾದಲ್ಲಿ ಪಾರ್ಟ್ ಟೈಂ ಕೌನ್ಸಿಲರ್ ಆಗಿ ಕೆಲಸ ಮಾಡುವ ಬರ್ನಾರ್ಡೋ ಬಸ್ಟಿಲ್ಲೋ, ಅಧಿಕೃತ ಸಭೆಯ ನಡುವೆಯೇ ಸ್ನಾನ ಮಾಡಲು ಮುಂದಾಗಿದ್ದಾರೆ. ಈ ಆನ್ಲೈನ್ ಮೀಟಿಂಗ್‌ನ ವಿಡಿಯೋ ಪತ್ರಕರ್ತರು ಹಾಗೂ ಸಾರ್ವಜನಿಕರಿಗೆ ಲೈವ್ ಸ್ಟ್ರೀಮ್ ಬೇರೆ ಆಗುತ್ತಿತ್ತು.
ಬೆಳಿಗ್ಗೆ 8ಗಂಟೆಗೆ ಆರಂಭಗೊಂಡ ಮೀಟಿಂಗ್ ಮಧ್ಯಾಹ್ನವಾದರೂ ನಡೆಯುತ್ತಲೇ ಇದ್ದ ಕಾರಣದಿಂದಾಗಿ, ತನ್ನ ಮಗಳನ್ನು ನೋಡಿಕೊಂಡು, ಬೇರೆ ಕೆಲಸಗಳಿಗೆ ಮುಂದಾಗಲು ಸಮಯದ ಅಭಾವ ಎದುರಾಗಬಹುದು ಎಂದು ಕಳವಳಗೊಂಡ ಬಸ್ಟಿಲ್ಲೋ ಮಲ್ಟಿ ಟಾಸ್ಕಿಂಗ್ ಮಾಡುವ ಐಡಿಯಾಗೆ ಮುಂದಾದರು.
ತಮ್ಮ ಕಂಪ್ಯೂಟರ್ ಸ್ಕ್ರೀನ್ ಅನ್ನು ಮಿನಿಮೈಝ್ ಮಾಡಿದ ಬಸ್ಟಿಲ್ಲೋ, ಬಾತ್‌ರೂಂನಿಂದಲೇ ಈ ಕರೆಯಲ್ಲಿ ತಮ್ಮ ಭಾಗಿದಾರಿಕೆ ಮುಂದುವರೆಸಿದ್ದಾರೆ. ಆದರೆ ಅವರ ಲೆಕ್ಕಾಚಾರ ತಲೆಕೆಳಗಾಗಿ, ಅವರು ಸ್ನಾನ ಮಾಡುತ್ತಿದ್ದ ದೃಶ್ಯಾವಳಿಯು ಬಚ್ಚಲುಮನೆಯ ಪರದೆಯಿಂದ ಬ್ಲರ್ ಆಗಿ ಎಲ್ಲಾ ಕಡೆ ಬಿತ್ತರಗೊಂಡಿದೆ.