ಸಿಯೋಲ್: ದಕ್ಷಿಣ ಕೊರಿಯಾದ ಕಿಂಗ್ ಕಾಂಗ್ ಇನು ಎಂಬ ಮಹಿಳೆ ಸ್ಥಾಪಿಸಿದ ಸ್ವಯಂ ಸೇವಾ ಸಂಸ್ಥೆ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಕೊರೊನಾದ ಸಂದರ್ಭದಲ್ಲೂ ರಾಷ್ಟ್ರೀಯ ಉದ್ಯಾನಗಳಲ್ಲಿ ಅವರ ಕ್ಲೀನ್ ಹೈಕರ್ ಎಂಬ ಸ್ವಯಂಸೇವಾ ಸಂಸ್ಥೆಯ ಸದಸ್ಯರು ಕಸ ಹೆಕ್ಕಿ ಅದನ್ನು ಕಲಾಕೃತಿಯಾಗಿ ಪರಿವರ್ತಿಸುತ್ತಿದ್ದಾರೆ.
ದಕ್ಷಿಣ ಕೊರಿಯಾದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನ ಮೌಂಟ್ ಜಿರಿ ಎಂಬಲ್ಲಿಗೆ 2018 ರಲ್ಲಿ ಎರಡು ದಿನದ ಪ್ರವಾಸ ಕೈಗೊಂಡಿದ್ದ ಸಂಚಾರಿ ಕಿಮ್ ಕಾಂಗ್ ಇನು ಅಲ್ಲಿ ಬಿದ್ದ ಕಸ ನೋಡಿ ದಂಗಾಗಿದ್ದರು. ಇದಕ್ಕಾಗಿ ಏನಾದರೂ ಮಾಡಬೇಕು ಎಂಬ ಸಂಕಲ್ಪ ಮಾಡಿ ‘ಸ್ವಚ್ಛ ಸಂಚಾರಿಗಳು’ (ಕ್ಲೀನ್ ಹೈಕರ್) ಗುಂಪನ್ನು ರಚಿಸಿದರು. ಈ ಗುಂಪು ಈಗ ಕೇವಲ ಒಂದೇ ಕಡೆಯಲ್ಲ, ಸೌತ್ ಕೊರಿಯಾದ ಹಲವು ರಾಷ್ಟ್ರೀಯ ಉದ್ಯಾನಗಳಲ್ಲಿ ತಮ್ಮ ಕಾರ್ಯ ನಡೆಸುತ್ತಿದೆ.
‘ನಾವು ಕಸದಿಂದ ಮಾಡಿದ ಕಲಾಕೃತಿಗಳ ಆಕರ್ಷಕ ಫೋಟೋ ತೆಗೆಯುತ್ತೇವೆ. ಅದು ಒಂದು ಕಸ ಎಂದು ಯಾರೂ ಹೇಳುವಂತೆಯೇ ಇರುವುದಿಲ್ಲ. ಕಸದ ಕಲೆಯನ್ನು ಜನ ಶ್ಲಾಘಿಸಿದರು ಮತ್ತು ಉತ್ತಮವಾಗಿ ಸ್ವೀಕರಿಸಿದರು’ ಎನ್ನುತ್ತಾರೆ 30 ವರ್ಷದ ಕಿಮ್.
ಕೋವಿಡ್-19 ಕಾಲದಲ್ಲೂ ಗುಂಪು ಕಾರ್ಯನಿರ್ವಹಿಸಿದೆ. ವಿಚಿತ್ರ ಎಂದರೆ ದಾಖಲೆಗಳ ಪ್ರಕಾರ ಕೋವಿಡ್ ನಂತರ ಸೌತ್ ಕೊರಿಯಾದ ರಾಷ್ಟ್ರೀಯ ಉದ್ಯಾನಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇ.20 ರಷ್ಟು ಹೆಚ್ಚಿದೆ. ಇದರಿಂದ ಕಸವೂ ಹೆಚ್ಚಿದೆ. ಮೊದಲ 9 ತಿಂಗಳಲ್ಲಿ 22 ರಾಷ್ಟ್ರೀಯ ಉದ್ಯಾನಗಳಿಂದ ಸುಮಾರು 800 ಟನ್ ಕಸ ಸಂಗ್ರಹಿಸಲಾಗಿದೆ ಎಂದು ಕಿಮ್ ವಿವರಿಸಿದ್ದಾರೆ.