ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು, ಮನೆಗಳಿಗೆ ನುಗ್ಗಿ ಕಾಟ ಕೊಡುತ್ತಿದ್ದ ಹೆಗ್ಗೋತಿಯನ್ನು ಹಿಡಿದಿಡಲಾಗಿದೆ. ಕೇಪ್ ಟೌನ್ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿರುವ ಮಂಗಗಳ ದೋಷಾರೋಪಣೆ ಪಟ್ಟಿ ದೊಡ್ಡದಾಗಿಯೇ ಇದೆ. ಬೆಟ್ಟ-ಗುಡ್ಡಗಳಿಂದ ನಗರ ಪ್ರವೇಶಿಸುವ ಕೋತಿಗಳ ಹಿಂಡು, ಕಟ್ಟಡಗಳಿಗೆ ನುಗ್ಗಿ ದಾಂಧಲೆ ನಡೆಸುತ್ತವೆ.
ಮನೆ ಮುಂದಿನ ಹೂವು, ಹಣ್ಣು, ತರಕಾರಿ ಗಿಡಗಳ ಮೇಲೆ ದಾಳಿ ಮಾಡಿ, ಅವುಗಳನ್ನು ತಿನ್ನುವುದೂ ಅಲ್ಲದೆ, ಗಿಡಗಳನ್ನೂ ಹಾಳುಗೆಡವುತ್ತವೆ. ಸಾಲದ್ದಕ್ಕೆ ಮನೆಯೊಳಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚುತ್ತವೆ.
ಸುಮಾರು 500 ಕೋತಿಗಳು 15 ಗುಂಪುಗಳಾಗಿ ದಂಡೆತ್ತಿ ಬರುತ್ತವೆ. ಇದನ್ನು ನಿಗ್ರಹಿಸುವುದಕ್ಕೇ ಪ್ರತ್ಯೇಕ ತಂಡವಿದೆ. ಏರ್ ಗನ್ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದರು ಇವು ಜಗ್ಗುವುದಿಲ್ಲ.
ನಾಗರಿಕರು ಈ ಬಗ್ಗೆ ಸಾಕಷ್ಟು ದೂರು ಹೊತ್ತು ತರುವುದನ್ನು ತಡೆಯಲಾರದೆ ಇದನ್ನು ಹಿಡಿದು ಜೈಲಿಗಟ್ಟಿದೆ. ಕೆಲ ದಿನಗಳ ನಂತರ ನಾಡ ಕೋತಿಗಳ ಬದಲು ಕಾಡುಕೋತಿಗಳ ಜೊತೆ ಬಿಟ್ಟರೆ ಒಂದಿಷ್ಟು ಒಳ್ಳೆಯ ಬುದ್ಧಿ ಕಲಿಯಬಹುದು ಎಂದು ಕಾಯಲಾಗುತ್ತಿದೆ.
ಆದರೆ, ಪ್ರಾಣಿಪ್ರಿಯರು ಈಗಾಗಲೇ ಅಭಿಯಾನ ನಡೆಸುತ್ತಿದ್ದು, ಹಿಡಿದಿರುವ ಕೋತಿಯನ್ನು ಅದರ ಗುಂಪಿನೊಂದಿಗೇ ಸೇರಲು ಬಿಡಬೇಕು ಎನ್ನಲು ಶುರು ಮಾಡಿದ್ದಾರೆ. ಕೇಪ್ ಟೌನ್ ಆಡಳಿತವೀಗ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ.