ಕೆಥೆಡ್ರಲ್ ನ ವಿಕರ್ ಅವರ ಆನ್ಲೈನ್ ಪ್ರಾರ್ಥನೆಗೆ ಬೆಕ್ಕೊಂದು ಅತಿಥಿಯಾಗಿ ಬಂದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಕ್ಯಾಂಟರ್ಬರಿ ಕೆಥೆಡ್ರಲ್ ನ ವೆರಿ ರೆವರೆಂಡ್ ಡಾ.ರಾಬರ್ಟ್ ವಿಲ್ಲೀಸ್ ಅವರು ಸೋಮವಾರ ಬೆಳಗ್ಗೆ ಉದ್ಯಾನದಲ್ಲಿ ಕುಳಿತು ಲೈವ್ ಸ್ಟ್ರೀಮಿಂಗ್ ನಲ್ಲಿ ಪ್ರಾರ್ಥನೆ ಬೋಧಿಸುತ್ತಿದ್ದರು.
ಆಗ ನಿಧಾನವಾಗಿ ಬಂದ ಟೈಗರ್ ಹೆಸರಿನ ಬೆಕ್ಕು ಅವರ ಪಕ್ಕದಲ್ಲಿ ಇದ್ದ ಇನ್ನೊಂದು ಖಾಲಿ ಕುರ್ಚಿ ಹತ್ತಿ ಕೂರುತ್ತದೆ. ನಂತರ ಕೆಲ ಹೊತ್ತಿನಲ್ಲಿ ಟೇಬಲ್ ಮೇಲೆ ಹತ್ತಿ ವಿಕರ್ ಅವರು ಇಟ್ಟುಕೊಂಡಿದ್ದ ಹಾಲಿನ ಕಪ್ ನಲ್ಲಿ ಬಾಯಿ ಹಾಕಿ ಕುಡಿಯಲಾರಂಭಿಸುತ್ತದೆ. ಡಾ.ರಾಬರ್ಟ್ ವಿಲ್ಲೀಸ್ ಅವರು, “ಸಾರಿ ನನ್ನ ಒಬ್ಬ ಸ್ನೇಹಿತ ಬಂದಿದ್ದಾನೆ” ಎಂದು ಬೆಕ್ಕಿನ ತಲೆ ಸವರುತ್ತಾರೆ.
ಕೆಥೆಡ್ರಲ್ ನಿಂದ ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋವನ್ನು ರಿಚರ್ಸ್ ಎಂಬ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು, “ಕ್ಯಾಂಟರ್ಬರಿ ಕೆಥೆಡ್ರಲ್ ನ ಬೆಳಗಿನ ಲೈವ್ ಸ್ಟ್ರೀಮಿಂಗ್ ಪ್ರಾರ್ಥನೆ ವೇಳೆ ಟೈಗರ್ (ಬೆಕ್ಕಿನ ಹೆಸರು) ಹಾಲು ಕುಡಿಯುವಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದೆ” ಎಂದು ಬರೆಯಲಾಗಿದೆ.