ಕೊರೊನಾ ಹಲವರಿಗೆ ಕಾಡಿ ತೊಂದರೆ ನೀಡಿದೆ. ಎಷ್ಟೋ ಜೀವಗಳನ್ನು ಬಲಿ ಪಡೆದಿದೆ. ಇನ್ನು ಕೆಲವರಿಗೆ ಕೊರೊನಾ ನೇರವಾಗಿ ದಾಳಿ ಮಾಡದಿದ್ದರೂ ಅದರಿಂದ ಉಂಟಾದ ಅಡ್ಡ ಪರಿಣಾಮಗಳು ಪ್ರಭಾವ ಬೀರಿವೆ. ಅರ್ಜಂಟೀನಾದ ಫಾವಲೊರೊ ಫೌಂಡೇಶನ್ ವಿಶ್ವ ವಿದ್ಯಾಲಯದ ಆಸ್ಪತ್ರೆಯ ತಜ್ಞರು ಅಂಥ ಒಂದು ಆತಂಕಕಾರಿ ದುಷ್ಪರಿಣಾಮವನ್ನು ಕಂಡು ಹಿಡಿದಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಸಾಮಾಜಿಕ ಐಸೋಲೇಶನ್‌ನಲ್ಲಿ ಇದ್ದವರಲ್ಲಿ ರಕ್ತದೊತ್ತಡದ ಪ್ರಮಾಣ ಹೆಚ್ಚಿದೆ ಎಂದು ಸಂಶೋಧನೆ ಹೇಳಿದೆ. 2020 ರ ಮಾರ್ಚ್ 20 ರಿಂದ ಜೂನ್ 25 ರ ನಡುವಿನ ಮೂರು ತಿಂಗಳು ಹಾಗೂ 13 ಡಿಸೆಂಬರ್‌ನಿಂದ ಮಾರ್ಚ್ 19 ರವರೆಗಿನ ಮೂರುವರೆ ತಿಂಗಳಲ್ಲಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ದತ್ತಾಂಶವನ್ನು ಹೋಲಿಕೆ ವಿಶ್ಲೇಷಿಸಿದಾಗ ಈ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಸರಾಸರಿ 57 ವರ್ಷಗಳ ಶೇ. 45.6 ರಷ್ಟು ಮಹಿಳೆಯರನ್ನು ಒಳಗೊಂಡಿರುವ ಒಟ್ಟು 12,241 ರೋಗಿಗಳ ದಾಖಲೆಗಳನ್ನು ಪಡೆದ ತಜ್ಞರು ಅಧ್ಯಯನ ನಡೆಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಶೇ. 23.8 ರಷ್ಟು ಜನ ಅಧಿಕ ರಕ್ತದ ಒತ್ತಡದ ಕಾರಣಕ್ಕೆ ತುರ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 2019 ರ ಈ ಅವಧಿಯಲ್ಲಿ ಕೇವಲ ಶೇ.17.5ರಷ್ಟು ಜನ ಬಿಪಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಕೊರೊನಾ ಭಯ, ಸೀಮಿತ ಜನರ ಸಂಪರ್ಕ, ಕೌಟುಂಬಿಕ ಹಾಗೂ ಆರ್ಥಿಕ ಸಂಕಷ್ಟ ಹೆಚ್ಚಿದ್ದು, ರಕ್ತದೊತ್ತಡ ಹೆಚ್ಚಲು ಕಾರಣವಿರಬಹುದು’ ಎಂದು ಅಧ್ಯನದ ಮುಖ್ಯಸ್ಥ ಹಾಗೂ ಅಧ್ಯಯನ ಗ್ರಂಥದ ಲೇಖಕ ಮ್ಯಾಟಿಸ್ ಫೋಸ್ಕೊ ಹೇಳಿದ್ದಾರೆ.